ಮಡಿಕೇರಿ, ಡಿ. ೨೧: ಕುಶಾಲನಗರವನ್ನು ಪಟ್ಟಣ ಪಂಚಾಯಿತಿಯಿAದ ಪುರಸಭೆಯಾಗಿ ಬಡ್ತಿಗೊಳಿಸಲು ರಾಜ್ಯ ಸಚಿವ ಸಂಪುಟವು ಸರ್ವ ಸಮ್ಮತಿ ನೀಡಿರುವುದು ಹರ್ಷ ತಂದಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯವರೂ ಸ್ಪಂದಿಸಿದರು ಎಂದರು.
ಬೆಳೆಯುತ್ತಿರುವ ಕುಶಾಲನಗರವನ್ನು ಪುರಸಭೆಯಾಗಿ ಮಾರ್ಪಡಿಸಲು ಪ್ರಯತ್ನಪಟ್ಟುದಕ್ಕೆ ಸಫಲತೆ ಉಂಟಾಗಿದೆ. ಪ್ರಸ್ತಾವನೆಯು ಆರ್ಥಿಕ ಇಲಾಖೆ, ರಾಜ್ಯದ ಮುಖ್ಯ ಕಾರ್ಯದರ್ಶಿ ಮಟ್ಟದಲ್ಲಿ ವಿಲೇವಾರಿಗೊಂಡು ಅಂತಿಮವಾಗಿ ಸಚಿವ ಸಂಪುಟಕ್ಕೆ ಬಂದಾಗ ಅಂಗೀಕಾರವಾಗಿದೆ. ಸದ್ಯದಲ್ಲೇ ಗೆಜೆಟ್ ಪ್ರಕಟಣೆಗೊಳ್ಳಲಿದೆ. ಆ ಬಳಿಕ ಸುವ್ಯವಸ್ಥಿತವಾಗಿ ಪುರಸಭೆಯಾಗಿ ರೂಪುಗೊಳ್ಳಲಿದೆ. ಈ ಮೂಲಕ ಕುಶಾಲನಗರದ ಜನತೆಗೆ ಸವಲತ್ತು, ಸೌಲಭ್ಯ, ಅನುಕೂಲಗಳು ಹೆಚ್ಚಲಿವೆ ಎಂದು ರಂಜನ್ ವಿವರಿಸಿದರು.