ಸೋಮವಾರಪೇಟೆ, ಡಿ. ೨೧: ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸಿ.ಕೆ. ಸುಬ್ಬಯ್ಯ ರಸ್ತೆಯ ಎರಡೂ ಬದಿಗಳಲ್ಲಿ ಸೋಮವಾರದಂದು ವ್ಯಾಪಾರ ವಹಿವಾಟಿಗೆ ನಿರ್ಬಂಧ, ಹೊಸ ಬಡಾವಣೆಯಲ್ಲಿ ನಿರ್ಮಾಣ ಗೊಂಡಿರುವ ಮನೆಗಳ ನಿವೇಶನಕ್ಕೆ ನಕಲಿ ದಾಖಲೆ ನೀಡಿಕೆ, ಕಾಮಗಾರಿ ಆಗದಿದ್ದರೂ ಬಿಲ್ ಪಾವತಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಪ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.

ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರುಗಳು ಪಟ್ಟಣದ ಅಭಿವೃದ್ಧಿ, ಮೂಲಭೂತ ಸೌಕರ್ಯ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಸಂತೆ ದಿನದಂದು ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆ, ಮಾರುಕಟ್ಟೆ ಪ್ರವೇಶಿಸುವ ಸ್ಥಳಗಳಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವುದ ರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಮುಂದಿನ ವಾರದಿಂದ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸಭೆ ತೀರ್ಮಾನಿಸಿತು.

ಕಾಮಗಾರಿ ಪ್ರಾರಂಭಿಸಿ: ಶಾಲಾ ರಸ್ತೆಯಲ್ಲಿ ಮೋರಿ ದುರಸ್ತಿಯಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಬೇಕೆಂದು ಸದಸ್ಯೆ ಶೀಲಾ ಡಿಸೋಜ ಹೇಳಿದರು. ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚಲು ಟೆಂಡರ್ ಆಗಿದ್ದರೂ ಈವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ. ಶೀಘ್ರವಾಗಿ ಕೆಲಸ ಪೂರ್ಣಗೊಳಿಸಲು ಕ್ರಮವಹಿಸುವಂತೆ ಸಂಜೀವ ಸೂಚಿಸಿದರು.

ಪ.ಪಂ.ಗೆ ಕೆಟ್ಟ ಹೆಸರು: ಪಂಚಾಯಿತಿಗೆ ಖಾಯಂ ಇಂಜಿನಿಯರ್ ನೇಮಕವಾಗಬೇಕು. ಈ ಬಗ್ಗೆ ಶಾಸಕರ ಗಮನ ಸೆಳೆಯುವಂತೆ ಸದಸ್ಯ ಮೃತ್ಯುಂಜಯ ಸಲಹೆ ನೀಡಿದರು. ಇದರೊಂದಿಗೆ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರು, ಟೆಂಡರ್ ಮೊತ್ತಕ್ಕಿಂತ ಅತ್ಯಂತ ಕಡಿಮೆ ಹಣ ನಮೂದಿಸಿ ಟೆಂಡರ್ ಪಡೆಯುತ್ತಿದ್ದಾರೆ. ಇದು ಕಳಪೆ ಕಾಮಗಾರಿಗೆ ಕಾರಣವಾಗಲಿದೆ. ಒಂದು ವೇಳೆ ಕಾಮಗಾರಿ ಕಳಪೆಯಾದರೆ ಪಂಚಾಯಿತಿಗೆ ಕೆಟ್ಟಹೆಸರು ಬರುತ್ತದೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದರು.

ಪAಚಾಯಿತಿ ವತಿಯಿಂದ ನಡೆಯುವ ಕಾಮಗಾರಿಗಳ ಸಂಪೂರ್ಣ ಮಾಹಿತಿಯ ಫಲಕ ಗಳನ್ನು ಆಯಾ ಸ್ಥಳಗಳಲ್ಲಿ ಅಳವಡಿಸ ಬೇಕೆಂದು ಎಸ್. ಮಹೇಶ್ ತಿಳಿಸಿದರು.

ರಸ್ತೆಯಲ್ಲಿ ಬರ್ತ್ಡೇ ಪಾರ್ಟಿ: ಪಟ್ಟಣದಲ್ಲಿ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಹೊಸ ಬಲ್ಬ್ ಹಾಕಿದ ಮರುದಿನವೇ ಕೆಟ್ಟುಹೋಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು. ಪಟ್ಟಣದ ಉದ್ಯಾನವನ ಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ರಾತ್ರಿ ವೇಳೆ ಕೆಲವರು ಜಂಕ್ಷನ್‌ಗಳಲ್ಲಿ ಬರ್ತ್ಡೇ ಪಾರ್ಟಿ ಮಾಡುತ್ತಾ, ಬೊಬ್ಬೆ ಹಾಕುತ್ತಿದ್ದು, ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆ ಯಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಹೇಳಿದರು.

ನಕಲಿ ದಾಖಲೆ ಸಂಶಯ: ಹೊಸ ಬಡಾವಣೆಯಲ್ಲಿ ನಿವೇಶನ ಪಡೆದಿರುವ ಹಲವರಿಗೆ ನೀಡಿರುವ ದಾಖಲೆಗಳು ನಕಲಿಯಾಗಿರುವ ಬಗ್ಗೆ ಸಂಶಯವಿದೆ. ಪಂಚಾಯಿತಿಯ ಗಮನಕ್ಕೆ ಬಾರದೇ ಈ ಕೆಲಸ ಆಗಿದೆ. ಈಗಾಗಲೇ ನಿವೇಶನ ಪಡೆದಿರುವ ಫಲಾನುಭವಿ ಗಳಿಂದ ದಾಖಲೆಗಳನ್ನು ಪಡೆದು ಪುನರ್‌ಪರಿಶೀಲಿಸಬೇಕೆಂದು ಎಸ್. ಮಹೇಶ್ ಸಭೆಗೆ ತಿಳಿಸಿದರು.

ಉಳಿಕೆಯಾಗಿರುವ ನಿವೇಶನಗಳನ್ನು ಪ.ಪಂ.ನಲ್ಲಿರುವ ನಿವೇಶನ ರಹಿತ ಪೌರಕಾರ್ಮಿಕರು ಹಾಗೂ ವಾಟರ್‌ಮೆನ್‌ಗಳಿಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈಗಿನ ಆಡಳಿತ ಮಂಡಳಿಯಲ್ಲಿ ಹೆಚ್ಚಿನ ಸದಸ್ಯರು ಹೊಸಬರಾಗಿದ್ದು, ಸದಸ್ಯರ ಕರ್ತವ್ಯಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಬೇಕೆಂದು ಸದಸ್ಯ ಎಸ್.ಆರ್. ಸೋಮೇಶ್ ಸಲಹೆ ನೀಡಿದರು.

ಕೆಲಸ ಆಗದಿದ್ದರೂ ಹಣ ಬಿಡುಗಡೆ: ಪಟ್ಟಣ ವ್ಯಾಪ್ತಿಯ ಬಾವಿಗಳನ್ನು ಶುಚಿಗೊಳಿಸಲು ಈಗಾಗಲೇ ೬೫ಸಾವಿರ ಬಿಲ್ ಪಾವತಿ ಮಾಡಲಾಗಿದೆ. ಆದರೆ ಪಟ್ಟಣದ ಯಾವುದೇ ಬಾವಿಗಳನ್ನು ಶುಚಿ ಗೊಳಿಸಿಲ್ಲ. ಬಾವಿಗಳಲ್ಲಿ ಗಿಡಗಂಟಿಗಳು ಹಾಗೆಯೇ ಇವೆ. ಸುಣ್ಣಬಣ್ಣ ಬಳಿದಿರು ವುದಕ್ಕೆ ೬೫ ಸಾವಿರ ಆಗಿದೆಯಾ? ಎಂದು ಸದಸ್ಯ ಎಸ್.ಮಹೇಶ್ ಪ್ರಶ್ನಿಸಿದರು. ಇದಕ್ಕೆ ಇತರ ಸದಸ್ಯರೂ ದನಿಗೂಡಿಸಿದರು. ತಕ್ಷಣ ಬಾವಿಗಳನ್ನು ಸಮರ್ಪಕವಾಗಿ ದುರಸ್ತಿಗೊಳಿಸಲು ಸೂಚನೆ ನೀಡುವಂತೆ ಉಪಾಧ್ಯಕ್ಷ ಸಂಜೀವ ಸೂಚಿಸಿದರು.

ಬಾಡಿಗೆ ವಾಹನಗಳು ನಿಲುಗಡೆಗೊಳ್ಳುತ್ತಿರುವ ಸ್ಥಳದಲ್ಲಿ ಪಂಚಾಯಿತಿಗೆ ಸೇರಿದ ಜಾಗವಿದ್ದು, ಇದರಲ್ಲಿ ಸುಲಭ್ ಶೌಚಾಲಯ ನಿರ್ಮಿಸಿದರೆ ಸಾರ್ವಜನಿಕರಿಗೆ, ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡುವವರು, ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಸದಸ್ಯ ಮೃತ್ಯುಂಜಯ ಸಲಹೆ ನೀಡಿದರು. ಸಭೆಯಲ್ಲಿ ಸದಸ್ಯರುಗಳಾದ ಬಿ.ಆರ್. ಮಹೇಶ್, ವೆಂಕಟೇಶ್, ನಾಗರತ್ನ, ಮೋಹಿನಿ, ನಾಮ ನಿರ್ದೇಶನ ಸದಸ್ಯರಾದ ಶರತ್‌ಚಂದ್ರ, ಮುಖ್ಯಾಧಿಕಾರಿ ನಾಚಪ್ಪ, ಅಭಿಯಂತರ ಹೇಮಕುಮಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.