ಕುಶಾಲನಗರ, ಡಿ. ೨೧. ಕಾವೇರಿ ನದಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಕುಶಾಲನಗರ ವ್ಯಾಪ್ತಿಯ ನದಿ ನಿರ್ವಹಣೆ ಕಾಮಗಾರಿಯ ಮೂರನೇ ಹಂತ ಮತ್ತೆ ಸದ್ಯದಲ್ಲಿಯೇ ಚಾಲನೆಗೊಳ್ಳಲಿದೆ.
ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದ ಬಳಿ ಸರ್ಕಾರಿ ಪಾಲಿಟೆಕ್ನಿಕ್ ಎದುರು ನದಿ ಸಂಪೂರ್ಣ ಹೂಳು ಮತ್ತು ಗಿಡಗಂಟಿಗಳಿAದ ತುಂಬಿದ್ದು ಮಳೆಗಾಲ ಸಂದರ್ಭ ನೀರಿನ ಹರಿವಿಗೆ ಅಡ್ಡಿ ಉಂಟಾಗಿ ಪ್ರವಾಹಕ್ಕೆ ಕಾರಣವಾಗುತ್ತಿತ್ತು. ಅಲ್ಲಿನ ಸ್ಥಳೀಯ ಹಲವಾರು ಅಂಗಡಿ ಮುಂಗಟ್ಟುಗಳು, ಮನೆಗಳು ನೀರಿನಿಂದ ಮುಳುಗಿ, ಇನ್ನೊಂದೆಡೆ ಮಡಿಕೇರಿ-ಕುಶಾಲನಗರ ಹೆದ್ದಾರಿ ರಸ್ತೆ ಮೇಲೆ ನೀರು ಹರಿದು ವಾಹನ ಸಂಚಾರ ಕೂಡ ಸಮಸ್ಯೆಗೆ ಒಳಗಾಗಿತ್ತು. ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಆಗ್ರಹದ ಮೇರೆಗೆ ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್ ಅವರ ನೇತೃತ್ವದಲ್ಲಿ ಸುಮಾರು ೧ ಕೋಟಿ ರೂ. ವೆಚ್ಚದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನದಿ ನಿರ್ವಹಣೆ ಕಾಮಗಾರಿ ನಡೆದಿದ್ದು ಆ ಮೂಲಕ ಪಟ್ಟಣದ ಪ್ರವಾಹ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಂತಾಗಿತ್ತು.
ಕಳೆದ ಮಾರ್ಚ್ ತಿಂಗಳಲ್ಲಿ ಮಾದಾಪಟ್ಟಣ ನದಿತೀರದ ಗ್ರಾಮಸ್ಥರು, ಜನಪ್ರತಿನಿಧಿಗಳು ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಮೂಲಕ ಕ್ಷೇತ್ರ ಶಾಸಕರಲ್ಲಿ ಮನವಿ ಸಲ್ಲಿಸಿದ ಮೇರೆಗೆ ಶಾಸಕರು ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಇದೀಗ ೫೦ ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಮಾದಾಪಟ್ಟಣ ಬಳಿ ಕಾವೇರಿ ನದಿ ನಿರ್ವಹಣೆಗಾಗಿ ಕಾವೇರಿ ನೀರಾವರಿ ನಿಗಮದ ಮೂಲಕ ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಹೂಳೆತ್ತುವ ಮತ್ತು ಗಿಡಗಂಟಿಗಳ ತೆರವುಗೊಳಿಸುವ ಕಾಮಗಾರಿ ಪ್ರಾರಂಭವಾಗಲಿದೆ.
ಇತ್ತೀಚೆಗೆ ಮಾದಾಪಟ್ಟಣ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಅಧ್ಯಕ್ಷ ಚಂದ್ರಮೋಹನ್ ಅಹವಾಲು ಸಲ್ಲಿಸಿದ ವೇಳೆ ಜಿಲ್ಲಾಧಿಕಾರಿ ಡಾ ಸತೀಶ ಅವರು ಕಾಮಗಾರಿಯನ್ನು ಕೂಡಲೇ ಆರಂಭಿಸುವAತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಈ ತಿಂಗಳ ಅಂತ್ಯದಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. -ಸಿಂಚು