ಇತ್ತೀಚೆಗೆ ಇಹಲೋಕವನ್ನು ತ್ಯಜಿಸಿದ ಮುಲ್ಲೇಂಗಡ ಬೇಬಿ ಚೋಂದಮ್ಮ ತಮ್ಮ ಕಣ್ಣುಗಳನ್ನು ದಾನ ಮಾಡಿ ಅಂಧರಿಗೆ ಬೆಳಕು ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ತನ್ನ ಶರೀರವನ್ನು ದಾನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆರವಾಗುವ ಆದರ್ಶ ಮೆರೆದಿದ್ದಾರೆ. ಇವರು ಕೊಡಗಿನ ಕೋಕೇರಿ ಗ್ರಾಮದ ಚೇನಂಡ ಮುದ್ದಯ್ಯ ಹಾಗೂ ಮುತ್ತವ್ವ ದಂಪತಿಗಳ ಹಿರಿಯ ಪುತ್ರಿ. ‘ತೂಕ್‌ಬೊಳಕ್’ ಪತ್ರಿಕೆಯ ಸಂಪಾದಕರಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪನವರ ಪತ್ನಿ. ಪತಿಯೊಂದಿಗೆ ತೂಕ್‌ಬೊಳಕ್ ಕೊಡವ ಭಾಷಾ ಪತ್ರಿಕೆಯ ಸಹ ಸಂಪಾದಕಿಯಾಗಿ ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದವರು. ಎಳವೆಯಲ್ಲಿಯೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಗಳಲ್ಲಿ ಕ್ರಿಯಾಶೀಲರಾಗಿದ್ದ ಇವರು ಅತ್ಯುತ್ತಮ ಎನ್.ಸಿ.ಸಿ. ಕೆಡೆಟ್ ಆಗಿದ್ದು, ಶೂಟಿಂಗ್ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದವರು. ತಾವು ವಿದ್ಯಾರ್ಜನೆಗೈದ ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡು ಸುಮಾರು ೫ ವರ್ಷ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನಂತರ ೩೪ ವರ್ಷ ಪ್ರೌಢಶಾಲಾ ಶಿಕ್ಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಕೀರ್ತಿ ಇವರದು. ಇವರು ಬರೆದಿರುವ "ಪಡ್‌ಞರ್‌ಕ್ ಪೋನಲ್ಲಿ" ಕೃತಿಗೆ ಕೊಡವ ಭಾಷೆಯ ಮೊಟ್ಟಮೊದಲ ಪ್ರವಾಸ ಕಥನ ಎಂಬ ಹೆಗ್ಗಳಿಕೆಯಿದೆ. ಇದರೊಂದಿಗೆ ಹಲವಾರು ಲೇಖನಗಳನ್ನು ಜಿಲ್ಲೆಯ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಉತ್ತಮ ವಿಮರ್ಶಕರೂ ಆಗಿದ್ದ ಇವರು ಕನ್ನಡ ಪಂಡಿತ, ಕನ್ನಡ ರತ್ನ, ಹಿಂದಿ ಭಾಷಾ ಪ್ರವೀಣ ಹಾಗೂ ಬಿ.ಇಡಿ ಪದವೀಧರರು. ಕನ್ನಡ ಪಂಡಿತ ಪದವಿ ಪಡೆದ ಮೊದಲ ಕೊಡವತಿ ಎಂಬ ಹೆಗ್ಗಳಿಕೆ ಕೂಡ ಇವರದು. ತಮಗೆ ವಿದ್ಯೆ ಕಲಿಸಿದ ಗುರು "ಭಾರತೀಸುತ"ರ "ಹುಲಿಯ ಹಾಲಿನ ಮೇವು" ಕಾದಂಬರಿಯನ್ನು "ಕರ್‌ಂದ್ ನರಿಪಾಲ್ ಕುಡ್ಚವು" ಎಂಬ ಶೀರ್ಷಿಕೆಯಲ್ಲಿ ಕೊಡವ ಭಾಷೆಗೆ ಅನುವಾದಿಸಿದ್ದರು. ಹಲವು ನಿಘಂಟು ರಚನಾ ಸಮಿತಿಗಳಲ್ಲಿ ಸದಸ್ಯರಾಗಿ ದುಡಿದಿದ್ದರು. ರಾಜ್ಯ ಮಟ್ಟದ ಹಲವು ಬಾನುಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ಕೊಂಡಿದ್ದರು. ರಾಷ್ಟಿçÃಯ ಸಂತ ಕವಿ ಕನಕದಾಸ ಅಧ್ಯಯನ ಕೇಂದ್ರದ ಕನಕದಾಸ ಸಾಹಿತ್ಯ ಅನುವಾದ ಯೋಜನೆಯ ಅನುವಾದಕರಾಗಿ ಕಾರ್ಯನಿರ್ವಹಿಸುವ ಜೊತೆಗೆ ಅನೇಕ ಸಂಘ-ಸAಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿದ್ದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ರಾಗಿಯೂ ಗುರುತರ ಸೇವೆ ಸಲ್ಲಿಸಿದ್ದರು. ಸಾಹಿತ್ಯ ಕೃಷಿಯ ಜೊತೆಗೆ ನಟನೆಯನ್ನು ಹವ್ಯಾಸವಾಗಿಸಿಕೊಂಡಿದ್ದ ಇವರು "ಬಾಳ್ ಪೊಲಂದತ್" ಕೊಡವ ಸಿನಿಮಾ ಸೇರಿದಂತೆ ಹಲವು ಸಿನಿಮಾ ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದರು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದವು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ವೀರಾಜಪೇಟೆ ತಾಲೂಕು ನಿಕಟಪೂರ್ವ ಅಧ್ಯಕ್ಷರಾದ ಮುಲ್ಲೇಂಗಡ ಮಧೋಶ್ ಪೂವಯ್ಯನವರ ತಾಯಿ. ಸೊಸೆ ಡಾ. ರೇವತಿ ಪೂವಯ್ಯ ಅವರು ಹಾಗೂ ಇಬ್ಬರು ಮೊಮ್ಮಕ್ಕಳ ಜೊತೆಗೆ ಎರಡನೇ ರುದ್ರಗುಪ್ಪೆಯಲ್ಲಿ ವಾಸವಿದ್ದ ಇವರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸಾಹಿತ್ಯದ ಹರಿವಿನಂತೆಯೇ ಸಮಾಜ ಸೇವೆ ಕೂಡ ಇವರ ಉಸಿರಾಗಿತ್ತು ಎನ್ನುವುದಕ್ಕೆ ಸಾಕ್ಷಿ ಎಂಬAತೆ ತನ್ನ ಮರಣದ ನಂತರದಲ್ಲಿ ತನ್ನ ಮೃತದೇಹವನ್ನು ಮೈಸೂರಿನ ಜೆ.ಎಸ್.ಎಸ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲೆಂದು ದಾನ ಮಾಡಿ ತಮ್ಮ ಬದುಕಿನ ಕೊನೆಯ ಹಂತದಲ್ಲಿಯೂ ಶ್ರೇಷ್ಠತೆ ಯನ್ನು ಮೆರೆದಿದ್ದಾರೆ. ಅಂತೆಯೇ ನಾನು ಕಣ್ಮರೆಯಾದರೂ ನನ್ನ ಕಣ್ಣು ಜಗತ್ತನ್ನು ಇನ್ನೂ ಒಂದಷ್ಟು ವರ್ಷಗಳ ಕಾಲ ಕಾಣುತ್ತಿರಲೆಂಬ ಆಶಯದಿಂದ ಮಡಿಕೇರಿ ವೈದ್ಯಕೀಯ ಕಾಲೇಜಿನ ಮುಖಾಂತರ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಗೆ ತನ್ನೆರಡೂ ಕಣ್ಣುಗಳನ್ನು ದಾನವಾಗಿ ನೀಡಿದ್ದಾರೆ. ಆ ಮೂಲಕ ಇತರ ವ್ಯಕ್ತಿಗಳಿಗೆ ಕಣ್ಣಾಗಿ ದಾರಿದೀಪವಾಗಿ ದ್ದಾರೆ. -ಸಬ್ಬುಡ ಅಶ್ವಿನಿ, ಮಡಿಕೇರಿ.