ಮಡಿಕೇರಿ, ಡಿ. ೨೧: ಎನ್‌ಆರ್ ಗ್ರೂಪ್ ಸಂಸ್ಥೆ ಹಾಗೂ ವೀರಾಜಪೇಟೆಯ ಕೂರ್ಗ್ ಗಾಲ್ಫ್ ಲಿಂಕ್ಸ್ ವತಿಯಿಂದ ಸಿಜಿಎಲ್-ಎನ್‌ಆರ್ ಗಾಲ್ಫ್ ಓಪನ್ ೨೦೨೧ ಚಾಂಪಿಯನ್‌ಶಿಪ್ ನಡೆಯಿತು.

ವೀರಾಜಪೇಟೆಯ ಕೂರ್ಗ್ ಗಾಲ್ಫ್ ಲಿಂಕ್ಸ್ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಎನ್‌ಆರ್ ಗ್ರೂಪ್‌ನ ವ್ಯವಸ್ಥಾಪಕ ಪಾಲುದಾರ ಅರ್ಜುನ್ ರಂಗಾ ಪಾಲ್ಗೊಂಡು ಮಾತನಾಡಿ, ವರ್ಷದಿಂದ ವರ್ಷಕ್ಕೆ ಸಿಜಿಎಲ್-ಎನ್‌ಆರ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್ ಪಂದ್ಯಾವಳಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯ ಆಟಗಾರರು ಪಾಲ್ಗೊಳ್ಳುತ್ತಿರುವುದು ಹೆಮ್ಮೆ ಎನಿಸಿದೆ. ಮುಂದಿನ ದಿನಗಳಲ್ಲಿ ಪಂದ್ಯಾವಳಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಆಯೋಜಿಸಲು ಉತ್ಸಾಹಿ ಆಟಗಾರರು ಸ್ಫೂರ್ತಿ ತುಂಬಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಿಜಿಎಲ್‌ನ ಕ್ಯಾಪ್ಟನ್ ಭರತ್ ಮಂದಣ್ಣ ಮಾತನಾಡಿ, ಗಾಲ್ಫ್ ಆಟವನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಮೂಲಕ ರಾಷ್ಟçಮಟ್ಟದಲ್ಲೂ ಟೂರ್ನಿಗಳನ್ನು ಆಯೋಜಿಸಿರುವ ಎನ್‌ಆರ್ ಸಮೂಹದ ಕಾರ್ಯ ಶ್ಲಾಘನಾರ್ಹವೆಂದರು. ಸಿಜಿಎಲ್-ಎನ್‌ಆರ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್ ಎಲ್ಲಾ ಉತ್ಸಾಹಿಗಳಿಗೆ ಉತ್ತಮ ವೇದಿಕೆಯಾಗಿದೆ. ಭವಿಷ್ಯದಲ್ಲಿ ಈ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಕ್ತ ಆಹ್ವಾನದ ಟೂರ್ನಿಯಲ್ಲಿ ಮೈಸೂರು, ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಊಟಿ, ಯುಕೆ ಮತ್ತು ಕೊಡೆಯಿಕೆನಾಲ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ೧೫೦ಕ್ಕೂ ಅಧಿಕ ಗಾಲ್ಫರ್‌ಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಸಿಜಿಎಲ್ ಕಾರ್ಯದರ್ಶಿ ಮೇಜರ್ ಬಿ.ಎ. ನಂಜಪ್ಪ, ಪಂದ್ಯಾವಳಿಯ ಉಪಸಮಿತಿಯ ಅಧ್ಯಕ್ಷ ಕೆ.ಯು. ವಿಕ್ರಾಂತ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.