ಮಡಿಕೇರಿ, ಡಿ. ೨೧: ಪೊನ್ನಂಪೇಟೆ ತಾಲೂಕಿನ ಹುದಿಕೇರಿ, ಟಿ. ಶೆಟ್ಟಿಗೇರಿ ಹಾಗೂ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಬರುವ ಒಟ್ಟು ೧೨೦೩.೧೪ ಎಕರೆ ಜಾಗದ ಮುಂದಿನ ಕ್ರಮಕ್ಕಾಗಿ ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಯೋಗಾನಂದ್ ಅರಣ್ಯ ಇಲಾಖೆಗೆ ಜ್ಞಾಪನಾ ಪತ್ರ ಹೊರಡಿಸಿದ್ದಾರೆ.

ಹೈಸೊಡ್ಲೂರು, ವೆಸ್ಟ್ನೆಮ್ಮಲೆ, ಪೊರಾಡು ಹಾಗೂ ಟಿ. ಶೆಟ್ಟಿಗೇರಿ ವ್ಯಾಪ್ತಿಯ ಒಟ್ಟು ೧೩ ಸರ್ವೆ ನಂಬರ್‌ಗಳಲ್ಲಿನ ಜಾಗವನ್ನು ಈ ಹಿಂದೆ ಲೀಸ್ (ಗೇಣಿ)ಗೆ ನೀಡಲಾಗಿತ್ತು. ಪ್ರಸ್ತುತ ಈ ಜಾಗ ಟಾಟಾ ಸಂಸ್ಥೆಯ ಸ್ವಾಧೀನದಲ್ಲಿದ್ದು, ಟೀ ಬೆಳೆಯನ್ನು ಈ ಜಾಗದಲ್ಲಿ ಬೆಳೆಯಲಾಗಿದೆ. ಇದೀಗ ನಡೆದಿರುವ ಹಲವು ಬೆಳವಣಿಗೆಗಳ ಬಳಿಕ ನಿನ್ನೆ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದಿಂದ ಈ ಕುರಿತಾಗಿ ಅರಣ್ಯ ಇಲಾಖೆಗೆ ಸೂಚನಾ ಪತ್ರ ನೀಡಲಾಗಿದೆ. ಈ ಮೇಲಿನ ಜಮೀನುಗಳ ಪಹಣಿಗಳು ಸರಕಾರದ ಹೆಸರಿನಲ್ಲಿದ್ದು, ಕಲಂ ೬ ರಲ್ಲಿ ‘ಮೀಸಲು ಅರಣ್ಯ’ ಎಂದು ದಾಖಲಾಗಿರುತ್ತದೆ.

ಇದನ್ನು ಸರಕಾರಿ ಆದೇಶ (ಸಂ.ಅ.ಪ.ಜೀ. ೧೯೨೧ ಎಫ್.ಎಲ್.ಎಲ್. ೨೦೦೮, ಬೆಂಗಳೂರು ದಿನಾಂಕ ೧೯-೧೨-೨೦೧೨) ದಂತೆ ನಿಗದಿತ ಸರ್ವೆ ನಂಬರ್‌ಗಳ ಗೇಣಿ ಅವಧಿಯು ೯೯ ವರ್ಷಗಳು ಪೂರ್ಣಗೊಂಡಿದ್ದು, ಸದರಿ ಸರ್ವೆ ನಂಬರ್‌ಗಳ ಭೂ ಪ್ರದೇಶಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕೊಡಗು ಜಿಲ್ಲೆಯ ಕರ್ನಾಟಕ ಅರಣ್ಯ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ನೀಡಲಾಗಿದೆ ಎಂದು ತಹಶೀಲ್ದಾರರು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ...

೧೯೧೪ ಮತ್ತು ೧೯೧೫ರ ಸಂದರ್ಭದಲ್ಲಿ ಆಗಿನ ಬ್ರಿಟಿಷ್ ಸರಕಾರ ಮೆಕ್‌ಡೋಗಲ್, ಗ್ಲೆನ್ ಲೋರ್ನಾ ಲಿಮಿಟೆಡ್‌ಗೆ ಈ ಜಾಗವನ್ನು ೯೯೯ ವರ್ಷಗಳ ಲೀಸ್ ಆಧಾರದಲ್ಲಿ ಒಪ್ಪಂದದAತೆ ಬಿಟ್ಟುಕೊಟ್ಟಿತ್ತು. ನಂತರದಲ್ಲಿ ಲೀಸ್ ಅವಧಿಯನ್ನು ೯೯ ವರ್ಷಗಳಿಗೆ ಎಂದು ಬದಲಾಯಿಸಲಾಗಿತ್ತು. ಇದರ ನಡುವೆ ಈ ಜಾಗಕ್ಕೆ ಸಂಬAಧಿಸಿದ ದಾಖಲೆ ಪೈಸಾರಿ - ಮೀಸಲು ಅರಣ್ಯ ಎಂದಿದ್ದನ್ನು ರೆಡೀಮ್ ಸಾಗು ಎಂದು ಬದಲಾಯಿಸಲಾಗಿದ್ದು, ಇದನ್ನು ತದನಂತರದಲ್ಲಿ ಸರಕಾರದ ಮೂಲಕ ಮತ್ತೆ

(ಮೊದಲ ಪುಟದಿಂದ) ಕಂದಾಯ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಪೈಸಾರಿ - ಮೀಸಲು ಅರಣ್ಯ ಎಂದೇ ಬದಲಾಯಿಸಲಾಗಿತ್ತು.

ಈ ಕ್ರಮ ಸರಿಯಲ್ಲ ಈ ತಿದ್ದುಪಡಿಯನ್ನು ರದ್ದು ಪಡಿಸುವಂತೆ ಕೋರಿ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರಂತೆ ವೀರಾಜಪೇಟೆ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಜಿ. ಲೋಕೇಶ್ ಅವರು ಸಂಸ್ಥೆಯ ಮೂಲಕ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಇತ್ತೀಚೆಗೆ ವಜಾಗೊಳಿಸಿ ತೀರ್ಪು ನೀಡಿದ್ದರು. ಇದೀಗ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳ ಕಚೇರಿಯಿಂದ ಈ ಬಗ್ಗೆ ಅರಣ್ಯ ಇಲಾಖೆಗೆ ಪತ್ರ ರವಾನೆಯಾಗಿದೆ.