ಗೋಣಿಕೊಪ್ಪ ವರದಿ, ಡಿ. ೨೦: ಯೋಜನೆಗಳ ಇಲಾಖಾವಾರು ಅನುಷ್ಠಾನದಿಂದ ಅಭಿವೃದ್ಧಿ ಸಾಧ್ಯ ಎಂದು ವೀರಾಜಪೇಟೆ ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿ ಪಿ. ಲಕ್ಷಿö್ಮ ಹೇಳಿದರು. ಪೊನ್ನಂಪೇಟೆ ಸಾಮರ್ಥ್ಯಸೌಧದಲ್ಲಿ ಸೋಮವಾರ ಆಯೋಜಿಸಿದ್ದ ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ, ಯೋಜನೆ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡಿ, ಸರ್ಕಾರದ ಪ್ರತಿ ಯೋಜನೆ ಗ್ರಾಮ ಮಟ್ಟದಲ್ಲಿ ಅನುಷ್ಠಾನಗೊಳ್ಳಬೇಕಿದೆ. ಇಲಾಖೆಗಳ ಸಮನ್ವಯತೆಯಿಂದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ನಿವೇಶನ ರಹಿತರ ಅರ್ಹ ಫಲಾನುಭವಿಗಳ ಪಟ್ಟಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಬೇಕು. ವಲಸೆ ಹೋಗುವ ಕಾರ್ಮಿಕರ ಕಡೆಗಣನೆ ಮಾಡದೆ ಕ್ರಮಕೈಗೊಳ್ಳಬೇಕಿದೆ. ಅವರು ಕೂಡ ಮನಸು ಬದಲಾಯಿಸಿಕೊಂಡು ಸ್ವಂತ ನೆಲೆ ಕಂಡುಕೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಸಿದಾಗ, ಅವರಿಗೆ ಗುರುತಿಸಿದ ಜಾಗದಲ್ಲಿ ವಸತಿ ಸೌಕರ್ಯ ನೀಡಲು ಯೋಜನೆ ರೂಪಿಸಲು ಸೂಚಿಸಿದರು.
ಗಡಿ ರಾಜ್ಯ ಕೇರಳದಿಂದ ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಶಾಲೆ, ಹಾಸ್ಟೆಲ್‌ಗಳಲ್ಲಿ ಸೋಂಕು ಹರಡದಂತೆ ಕ್ರಮಕೈಗೊಳ್ಳ ಬೇಕು. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ಹರಡುವು ದನ್ನು ನಿಯಂತ್ರಿಸಲು ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಸಹ ವಿದ್ಯಾರ್ಥಿಗಳೊಂದಿಗೆ ಒಟ್ಟಾಗಿ ಮಲಗಲು ಅವಕಾಶ ಮಾಡಿಕೊಡ ಬಾರದು. ಸ್ವಚ್ಛತೆ ಕಾಪಾಡುವುದು ಅಡುಗೆ ಸಹಾಯಕರ ಕರ್ತವ್ಯ. ವಸತಿ ನಿಲಯದ ಅಡುಗೆ ಕೋಣೆ ಸ್ವಚ್ಛತೆಗಾಗಿ ಅವರದ್ದೆ ಮನೆ ಎಂದು ಪರಿಗಣಿಸುವಂತಾಗಬೇಕು ಎಂದರು.
ತೋಟಗಾರಿಕಾ ಇಲಾಖೆಯಿಂದ ಗ್ರಾಮೀಣ ಮಟ್ಟದಲ್ಲಿ ಕೈಗೊಳ್ಳಬೇಕಾದ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸಿ ಸವಲತ್ತು ಕಲ್ಪಿಸಬೇಕು ಎಂದರು. ಮೀನುಗಾರಿಕೆ ಇಲಾಖೆಯಿಂದ ಗ್ರಾಮೀಣ ಪ್ರದೇಶದ ಪಂಚಾಯಿತಿ ಮಟ್ಟದ ಕೆರೆಯಲ್ಲಿ ಮೀನು ಸಾಕಣೆಗೆ ಮುಂದಾಗಬೇಕಿದೆ. ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಮಾತನಾಡಿ, ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ ಮೂರು ಮಕ್ಕಳಿಗೆ ಪಾಸಿಟಿವ್ ಬಂದಿದ್ದು, ತಾಲೂಕಿನಲ್ಲಿ ೮ ಡೆಲ್ಟಾ ಕೇಸ್ ಕೂಡ ದಾಖಲಾಗಿದೆ ಎಂದು ಮಾಹಿತಿ ನೀಡಿದರು. ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಇದ್ದರು.