ಮಡಿಕೇರಿ, ಡಿ. ೨೦: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಸಿಪಿಐಎಂ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಅಗತ್ಯ ವಸ್ತುಗಳಾದ ಅಡುಗೆ ಎಣ್ಣೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಔಷಧಿಗಳ ಬೆಲೆ ಏರಿಕೆಯನ್ನು ನಿಯಂತ್ರಿಸದೆ ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರನ್ನು ಸರ್ಕಾರ ಮತ್ತಷ್ಟು ತೊಂದರೆಗೆ ಸಿಲುಕಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ೩೦ ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್, ೩೦೦ ರೂಪಾಯಿಗೆ ಗ್ಯಾಸ್ ವಿತರಿಸುತ್ತೇವೆ ಎಂಬುದಾಗಿ ಭರವಸೆ ನೀಡಲಾಗಿತ್ತು. ಆದರೆ, ಕಳೆದ ನಾಲ್ಕು ವಾರದಲ್ಲಿ ೨೨ ಬಾರಿ ಇಂಧನ ಬೆಲೆ ಹೆಚ್ಚಳ ಮಾಡಲಾಗಿದೆ. ಇದು ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದ್ದು, ಜನತೆ ಬೆಲೆ ಏರಿಕೆಯ ಬೇಗುದಿಯಲ್ಲಿ ಸಿಕ್ಕಿ ನರಳುತ್ತಿದ್ದಾರೆ. ಕೇಂದ್ರ ಸರಕಾರ ಅನುಸರಿಸುತ್ತಿರುವ ಕ್ರಮ ಸರಿಯಾದುದಲ್ಲ. ತೆರಿಗೆ ವಿಧಿಸಿರುವ ಕ್ರಮವೇ ಸರಿಯಲ್ಲ. ಇದರಲ್ಲಿಯೇ ಅಮೂಲಾಗ್ರ ಬದಲಾವಣೆ ಆಗಬೇಕಾಗಿದೆ. ತಕ್ಷಣವೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಿಪಿಐಎಂ ಪ್ರಮುಖರಾದ ಹೆಚ್.ಬಿ. ರಮೇಶ್, ಪಿ.ಆರ್. ಭರತ್, ಎ. ಮಹದೇವ್, ಎನ್.ಡಿ. ಕುಟ್ಟಪ್ಪ, ಪದ್ಮಿನಿ ಮತ್ತಿತರರಿದ್ದರು.