ಸೋಮವಾರಪೇಟೆ, ಡಿ. ೨೦: ಜಿಲ್ಲೆಯ ರೈತರು ಹಾಗೂ ಕಾಫಿ ಬೆಳೆಗಾರರ ಬೇಡಿಕೆಯನ್ನು ಸರ್ಕಾರ ಬೆಳಗಾವಿ ಅಧಿವೇಶನದಲ್ಲೇ ಈಡೇರಿಸದಿದ್ದರೆ ವಿಧಾನ ಸೌಧ ಚಲೋ ಹಾಗೂ ಬಾರುಕೋಲು ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.

ಕಾಫಿ ಬೆಳೆಗಾರರ ೧೦ ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಕಾಫಿ, ಕಾಳುಮೆಣಸು ಏಲಕ್ಕಿ ಬೆಳೆಗಳಿಗೆ ಬೆಂಬಲ ಬೆಲೆ (ಎಂಎಸ್‌ಪಿ) ನೀಡಬೇಕು. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕಳೆದ ೮ ದಿನಗಳಿಂದ ಪಟ್ಟಣದ ಜೇಸಿ ವೇದಿಕೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಗಮನಹರಿಸಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ತಾಲೂಕು ಸಂಚಾಲಕ ಜಿ.ಎಂ. ಹೂವಯ್ಯ, ಸೈನಿಕರು, ರೈತರು ದೇಶ ರಕ್ಷಣೆ ಮಾಡುತ್ತಿದ್ದಾರೆ. ಅವರಿಗೆ ಅನ್ಯಾಯ ಮಾಡಿದ ಸರ್ಕಾರ ಉಳಿಯಲು ಸಾಧ್ಯವಿಲ್ಲ. ಕೊಡಗಿನ ಸಂಪತ್ತನ್ನು ತೆರಿಗೆ ರೂಪದಲ್ಲಿ ಪಡೆಯುತ್ತಿರುವ ಸರ್ಕಾರ, ರೈತರ ಸಣ್ಣ ಬೇಡಿಕೆಯನ್ನೂ ಈಡೇರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿವೇಶನದಲ್ಲಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲು ಕಾನೂನಾತ್ಮಕ ಒಪ್ಪಿಗೆ ನೀಡಲೇಬೇಕು. ತಪ್ಪಿದಲ್ಲಿ ರಸ್ತೆತಡೆ, ಅಹೋರಾತ್ರಿ ಪ್ರತಿಭಟನೆ, ವಿಧಾನ ಸೌಧ ಮುತ್ತಿಗೆ, ಬಾರುಕೋಲು ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಧರಣಿಯಲ್ಲಿ ರೈತ ಮುಖಂಡ ರಾದ ಲಿಂಗೇರಿ ರಾಜೇಶ್, ತಲ್ತಾರೆ ರಾಜಪ್ಪ, ಹೊಸಗುತ್ತಿ ಶಂಕರಪ್ಪ, ಜೈಶಂಕರ್ ಅವರುಗಳು ಭಾಗವಹಿಸಿ ಸರ್ಕಾರ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ದರು. ಪ್ರತಿಭಟನೆಯಲ್ಲಿ ರೈತ ಹೋರಾಟಗಾರರಾದ ನಾಪಂಡ ಮುತ್ತಪ್ಪ, ಲಕ್ಕಯ್ಯ, ಬ್ಯಾಡಗೊಟ್ಟ ಜಕ್ರಿಯ, ತಂಬಲಗೇರಿ ಸುಬ್ರಮಣಿ, ಕೆ.ಎಂ. ದಿನೇಶ್, ಎಚ್.ಪಿ.ಸುರೇಶ್, ಹಾನಗಲ್ಲು ರಾಜು ಮತ್ತಿತರರು ಇದ್ದರು.