ಮಡಿಕೇರಿ, ಡಿ. ೧೯ : ಬ್ರಾಹ್ಮಣ ಎನ್ನುವುದು ಒಂದು ಜಾತಿ ಎನ್ನುವುದಕ್ಕಿಂತ ಮುಖ್ಯವಾಗಿ ಅದರ ಅಸ್ತಿತ್ವವು ಸಂಸ್ಕಾರ ಹಾಗೂ ಆಚರಣೆಗಳನ್ನು ಅವಲಂಬಿಸಿದೆ. ಆದರೆ ಇಂದು ಬ್ರಾಹ್ಮಣರು ಸಂಸ್ಕಾರವನ್ನು ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿರುವ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ವಿದ್ವಾನ್ ಭಾನುಪ್ರಕಾಶ್ ಶರ್ಮ, ಸಂಸ್ಕಾರವನ್ನು ಉಳಿಸಿ ಬೆಳೆಸುವುದರೊಂದಿಗೆ ಬ್ರಾಹ್ಮಣ್ಯವನ್ನು ಪುನರುತ್ಥಾನ ಗೊಳಿಸುವ ಮೂಲಕ ಮುಂದಿನ ಪೀಳಿಗೆ ಅದನ್ನು ಸದೃಢಗೊಳಿಸುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.
ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಯಶಸ್ವೀ ನೂರು ಸಂವತ್ಸರಗಳನ್ನು ಪೂರೈಸಿದ ಹಿನ್ನೆಲೆ ನಗರದಲ್ಲಿ ನಡೆದ ಶತಮಾನೋತ್ಸವ ಸಂಭ್ರಮಾಚರಣೆ ಹಾಗೂ ಶತಮಾನೋತ್ಸವ ಭವನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ದೇಶದಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ಸಂಸ್ಕಾರಗಳ ಆಚರಣೆಗಳ ಮೂಲಕವೇ ಶ್ರೇಷ್ಠ ಎನಿಸಿಕೊಂಡಿದ್ದೇವೆ. ಹೆಜ್ಜೆ ಹೆಜ್ಜೆಗೂ ಸಂಸ್ಕಾರವನ್ನು ನಾವು ಅನುಸರಿಸಬೇಕಾಗುತ್ತದೆ. ಆದರೆ ಇಂದು ಸಂಸ್ಕಾರವನ್ನು ಮರೆಯುತ್ತಾ ಬರುತ್ತಿರುವುದರಿಂದ ನಮ್ಮ ಆಚಾರ, ವಿಚಾರ, ಸಂಸ್ಕೃತಿಯ ಮುಂದುವರಿಕೆ ಅಸಾಧ್ಯವಾಗಿದೆ. ಸಂಸ್ಕಾರವನ್ನು ಅನುಸರಿಸದೆ ಇರುವುದರಿಂದ ನಾವು ಬ್ರಾಹ್ಮಣ ಎಂದು ಹೇಳಿಕೊಳ್ಳುವ ಶಕ್ತಿಯೂ ಕುಂದುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸ್ಕಾರಕ್ಕೆ ಮತ್ತೆ ಜೀವ ತುಂಬುವ ಕಾರ್ಯ ಮಾಡಬೇಕು, ಬೆಂಕಿ ಕೆಂಡದ ರೀತಿಯಲ್ಲಿ ಸಂಸ್ಕಾರವನ್ನು ಸಿದ್ಧಿ ಮಾಡಿಕೊಂಡು ಪ್ರಕಾಶಮಾನವಾಗ ಬೇಕು. ಕೊನೆ ಕಾಲದಲ್ಲಿ ನಮ್ಮ ಜೊತೆ ಧರ್ಮದ ಫಲ ಮಾತ್ರ ಬರುತ್ತದೆ, ಆದ್ದರಿಂದ ಧರ್ಮ ಕಾರ್ಯದ ಮೂಲಕ ಸಾರ್ಥಕತೆಯನ್ನು ಪಡೆಯಬೇಕು. ನಮ್ಮ ಸಂಪಾದನೆಯಲ್ಲಿ ಧರ್ಮ ಕಾರ್ಯಗಳಿಗೂ ವಿನಿಯೋಗಿಸಬೇಕೆಂದು ಭಾನುಪ್ರಕಾಶ್ ಶರ್ಮ ತಿಳಿಸಿದರು.
ಕೊಡಗಿನ ಐದು ತಾಲೂಕುಗಳಲ್ಲಿ ಬ್ರಾಹ್ಮಣ ಸಮಾಜವನ್ನು ಸಂಘಟಿಸುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡಿ, ಸ್ವಾಭಿಮಾನದ ಮೂಲಕ ಸಮಾಜವನ್ನು ಮುನ್ನಡೆಸಿ ಎಂದು ಸಲಹೆ ನೀಡಿದರು.
ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ಕೆಐಎಂಎಸ್ ಸಂಸ್ಥೆಯ ಪ್ರೊ.ಗಿರಿಧರ್ ಉಪಾಧ್ಯಾಯ ಮಕ್ಕಳಲ್ಲಿ ಭವ್ಯ ಭಾರತದ ಬಗ್ಗೆ ಅಭಿಮಾನ ಮೂಡಿಸಬೇಕು ಮತ್ತು ದೇಶ ಕಟ್ಟುವ ಕುರಿತು ತಿಳಿಹೇಳಬೇಕು ಎಂದರು. ಪ್ರತಿಯೊಬರೂ ತಾವೇ ದೇಶವೆಂದು ಭಾವಿಸಿ ದೇಶಾಭಿಮಾನದ ಮೂಲಕ ಕಾರ್ಯನಿರ್ವಹಿಸಿ. ಮಾಜಿ ರಾಷ್ಟçಪತಿ ಡಾ.ಅಬ್ದುಲ್ ಕಲಾಂ ಅಂತಹವರ ಕನಸನ್ನು ನನಸು ಮಾಡಬೇಕು. ಭಾರತ ಉತ್ತುಂಗಕ್ಕೇರಬೇಕಾದರೆ ಬ್ರಾಹ್ಮಣರ ಸಹಕಾರವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು, ನಮ್ಮತನ ಕಳೆದುಕೊಳ್ಳದೆ ಮಕ್ಕಳ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಿದೆ. ವಿಭಿನ್ನ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ಭವ್ಯ ಭಾರತ ನಿರ್ಮಿಸುವತ್ತ ಮಕ್ಕಳನ್ನು ಹಿರಿಯರು ರೂಪುಗೊಳಿಸುವಂತೆ ಕರೆಯಿತ್ತರು.
ಪ್ರತಿಭಾ ಪುರಸ್ಕಾರ ಪಡೆದವರು ಮತ್ತೆ ಸಮಾಜಕ್ಕೆ ಮರಳಿ ಏನನ್ನಾದರೂ ನೀಡುವ ಮನೋಭಾ ವನೆಯನ್ನು ಬೆಳೆಸಿಕೊಳ್ಳಬೇಕು. ಮರಳಿ ನೀಡುವ ಮನಸ್ಸುಗಳು ಇಲ್ಲದಿದ್ದರೆ ಸಮಾಜ ಉದ್ಧಾರವಾಗಲು ಸಾಧ್ಯವಿಲ್ಲ. ಬ್ರಾಹ್ಮಣರು ಮೊದಲು ಎಚ್ಚೆತ್ತುಕೊಂಡು ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು. ಯುವಜನರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕೆಂದು ಗಿರಿಧರ್ ಕರೆ ನೀಡಿದರು.
(ಮೊದಲ ಪುಟದಿಂದ) ಪ್ರಾಸ್ತಾವಿಕವಾಗಿ ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಡಾ.ಎ.ಆರ್.ರಾಜರಾಮ ಮಾತನಾಡಿ ಸಂಘಟನೆ, ಸಂವರ್ಧನೆ ಮತ್ತು ಸಮಾಜಮುಖಿ ಎಂಬ ಚಿಂತನೆಯೊAದಿಗೆ ಭವನ ನಿರ್ಮಾಣ ಹಾಗೂ ಶತಮಾನೋತ್ಸವ ಸಂಭ್ರಮವನ್ನು ಆಚರಿಸಲು ಸಾಧ್ಯವಾಯಿತು ಎಂದರು.
ಕಷ್ಟದಲ್ಲಿರುವ ಹಿರಿಯ ಅರ್ಚಕರಿಗೆ ಸಹಾಯ ಮಾಡಲು ವಿಪ್ರ ನಿಧಿ ಸ್ಥಾಪಿಸಲಾಗುತ್ತಿದ್ದು, ಪ್ರತಿವರ್ಷ ಐವರಿಗೆ ನೆರವು ನೀಡಲಾಗುವುದು. ಸಂಧ್ಯಾಕಾಲದ ಬಂಧುಗಳ ನೆರವಿಗಾಗಿ ಸಂಧ್ಯಾ ನಿಧಿಯನ್ನು ಸ್ಥಾಪಿಸಿ ವಾರ್ಷಿಕ ೨೪ ಸಾವಿರ ರೂ.ಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಶತಮಾನೋತ್ಸವ ಸಂಭ್ರಮಕ್ಕಷ್ಟೇ ನಮ್ಮ ಪ್ರಯತ್ನ ಸೀಮಿತವಾಗದೆ ಸಹಸ್ರಮಾನೋತ್ಸವವನ್ನು ಆಚರಿಸುವಂತಾಗಬೇಕು. ಮುಂದಿನ ಪೀಳಿಗೆಗೆ ಈ ಬಗ್ಗೆ ಪ್ರೇರಣೆ ನೀಡಬೇಕು. ಆ ಮೂಲಕ ಬ್ರಾಹ್ಮಣ ಸಮಾಜ ಇಡೀ ವಿಶ್ವಕ್ಕೇ ಮಾದರಿಯಾಗಬೇಕೆಂದು ರಾಜರಾಮ ಹೇಳಿದರು.
ಶತಮಾನೋತ್ಸವ ಭವನ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾತನಾಡಿ ಮೌಖಿಕ, ಭೌತಿಕ ಮತ್ತು ದೈವಿಕ ಕಾರ್ಯಗಳ ಮೂಲಕ ಬ್ರಾಹ್ಮಣರ ಅಭಿವೃದ್ಧಿಯಾಗುತ್ತಿದ್ದು, ಈ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕೆಂದರು.
ಕೋವಿಡ್ ಮತ್ತು ಅತಿವೃಷ್ಟಿಯ ನಡುವೆಯೂ ಎಲ್ಲರ ಸಹಕಾರದಿಂದ ಕೇವಲ ೨೫೦ ದಿನಗಳಲ್ಲಿ ಭವನ ನಿರ್ಮಾಣವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಎ.ಗೋಪಾಲಕೃಷ್ಣ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದಕ್ಕೆ ಶತಮಾನೋತ್ಸವ ಭವನದ ನಿರ್ಮಾಣವೇ ಸಾಕ್ಷಿಯಾಗಿದೆ ಎಂದರು.
ನಿರಂತರ ಅತಿವೃಷ್ಟಿ ಮತ್ತು ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಭವನ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದಕ್ಕೆ ಸಮಾಜ ಬಾಂಧವರ ಸಹಕಾರವೇ ಕಾರಣವೆಂದು ಕೃತಜ್ಞತೆ ಸಲ್ಲಿಸಿದರು. ಇನ್ನು ಮುಂದೆ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಇದೇ ರೀತಿಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಬ್ರಾಹ್ಮಣ ಸಮಾಜದ ಸಂಘಟನೆ ಮತ್ತಷ್ಟು ಆಗಬೇಕಾಗಿದ್ದು, ನಿರಂತರ ಕಾರ್ಯಕ್ರಮಗಳ ಮೂಲಕ ಒಗ್ಗೂಡಬೇಕಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಇದೆ ಎಂದು ತಿಳಿಸಿದರು.
ದಾನಿಗಳಾದ ಅಮೆರಿಕಾ ನಾರ್ತ್ ಕೆರೋಲಿನಾದ ಡಾ.ರಾಜಾಭಟ್, ಮುಂಬೈನ ದೇವಕಿ ಎಂ.ಜನಾರ್ಧನ, ಅಭಿರಾಂ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸುದರ್ಶನ ಭಾರತೀಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಸಿ.ಎಸ್.ಸುರೇಶ್ ಸಂಪಾದಕತ್ವದ “ಶತಧಾರಾ” ಸ್ಮರಣ ಸಂಚಿಕೆಯನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು. ಪ್ರಮುಖ ದಾನಿಗಳು ಹಾಗೂ ಸಮಾಜದ ಕೆಲವು ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾಭಿವೃದ್ಧಿ ನಿಧಿ ಕಾರ್ಯದರ್ಶಿ ಅರುಣ್ ಕುಮಾರ್ ಸ್ವಾಗತಿಸಿ ರಾಮಚಂದ್ರ ಮೂಗೂರು ವಂದಿಸಿದರು. ಮಂಜುಳಾ ಬಾಲಕೃಷ್ಣ ನಿರೂಪಿಸಿದರು. ಸಮಾರಂಭವನ್ನು ದೀಪ ಬೆಳಗಿಸಿ ಧ್ವಜಾರೋಹಣ ಮೂಲಕ ಉದ್ಘಾಟಿಸಲಾಯಿತು. ಲಕ್ಷಿö್ಮ ಈಶ್ವರಭಟ್, ವೀಣಾ ಹೊಳ್ಳ ಪ್ರಾರ್ಥಿಸಿದರು. ಗೀತಾ ಗಿರೀಶ್ ತಂಡದಿAದ ಶಂಖ ನಾದ ಮೊಳಗಲ್ಪಟ್ಟಿತು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಇದಕ್ಕೂ ಮುನ್ನ ಬೆಳಗಿನ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲುವಿನ ಹಾಡುಗಾರ ಅನ್ವಿತ್ ಹಾಗೂ ವೀರಾಜಪೇಟೆಯ ಹಾಡುಗಾರ ಶ್ರೇಯಸ್ ಹಾಡುಗಾರಿಕೆ ಮೂಲಕ ಮನ ರಂಜಿಸಿದರು. ಪುಷ್ಪೋದ್ಯಾನದ ಕುರಿತು ಸವಿತಾ ಭಟ್. ಆಯುರ್ವೇದದ ಕುರಿತು ಡಾ. ಉದಯ ಶಂಕರ್,ಉದ್ಯಾನವನದ ಕುರಿತು ಮೋಹಿನಿ ನೆಲ್ಲಿತ್ತಾಯ,ಪ್ರಕೃತಿ ಚಿಕಿತ್ಸೆ ಹಾಗೂ ಯೋಗದ ಕುರಿತು ಡಾ. ವಿನಯ್ ಹೆಚ್. ಎಂ; ನೇತ್ರ ಚಿಕಿತ್ಸೆ ಕುರಿತು ಡಾ. ಕಿರಣ್ ಭಟ್ ಮಾಹಿತಿಗಳನ್ನು ನೀಡಿದರು. ಹಿರಿಯ ನಾಗರಿಕರುಗಳಾದ ಜ.ಟಿ.ರಾಘವೇಂದ್ರ, ಜಯಶೀಲ ಪ್ರಕಾಶ್, ಕಾಂತ ನಾಗೇಂದ್ರ, ರಾಮ್ದಾಸ್ ಅವರುಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯತು. ಜಯಪ್ರಕಾಶ್ ಅವರು ಬರೆದ ಪುಸ್ತಕ ಬಿಡುಗಡೆ ಮಾಡಲಾಯಿತು. ಮನೋರಮಾ ಭಕ್ತಿ ಗಾನ ಸುಧಾ ಕುರಿತು ಮಾತನಾಡಿದರು.
ವಿವಿಧ ವಿಭಾಗಗಳ ವೈದ್ಯರಿಂದ ಉಚಿತ ಅರೋಗ್ಯ ತಪಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಧನ್ವಂತರಿಯಾಗ
ಶನಿವಾರ ವೈದಿಕ ಸಂಭ್ರಮಾಚರಣೆ, ಸಂಜೆ ಪ್ರವೇಶಾಂಗ ವೈದಿಕ ಆಚರಣೆಗಳು ನಡೆದವು. ಭಾನುವಾರ ಬೆಳಿಗ್ಗೆ ಗಣಪತಿ ಪೂಜೆ, ರುದ್ರ ಪಠಣ ಪೂರ್ವಕ ರುದ್ರಾಭಿಷೇಕ, ಸೂಕ್ತ ಪಠಣ ನಡೆಯಿತು. ಗಣಪತಿ ಹವನ ಪೂರ್ವಕ ಐಕಮತ್ಯ ಹೋಮ ಹಾಗೂ ಧನ್ವಂತರಿಯಾಗ ನಡೆಯಿತು.
ಸಾಮಾಜಿಕ ಸಂಭ್ರಮಾಚರಣೆಯನ್ನು ಮಹಾದಾನಿಗಳಾದ ಡಾ.ರಾಜಾಭಟ್ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಮೇಶ್ ಹೊಳ್ಳ ಉದ್ಘಾಟಿಸಿದರು.
ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ. ಅವರ ನಿರ್ದೇಶನದ ಸಾಕ್ಷö್ಯ ಚಿತ್ರ “ಶತ ಸಿರಿ” ಪ್ರದರ್ಶನ ಗೊಂಡಿತು.