*ವೀರಾಜಪೇಟೆ, ಡಿ. ೨೦: ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದ ವೈದ್ಯಾಧಿಕಾರಿ ಡಾ. ವಿಶ್ವನಾಥ ಸಿಂಪಿ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ವಿಶ್ವನಾಥ ಸಿಂಪಿ ಅವರು ವೀರಾಜಪೇಟೆಯ ಪೂಮಾಲೆ ಮಂದ್ ನಿವಾಸಿ ಸೂರ್ಯ ಅವರಿಂದ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಆದ ಬಳಿಕ ೨ ಸಾವಿರ ಲಂಚ ಹಣವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳುವ ವೇಳೆ ಸೂರ್ಯ ಅವರ ಪತ್ನಿ ಲಲಿತಾ ಅವರು ನೀಡಿದ ದೂರಿನ ಹಿನ್ನೆಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣ ಸಮೇತ ವಿಶ್ವನಾಥ ಸಿಂಪಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದರು.

ಎಸಿಬಿ ಅಧಿಕಾರಿಗಳ ಸುದೀರ್ಘ ವಿಚಾರಣೆಯ ಬಳಿಕ ವೀರಾಜಪೇಟೆಯ ಎರಡನೇ ಜಿಲ್ಲಾ ಅಪಾರ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಧೀಶರು ತಾ.೨೩ ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಿದ್ದರು.

ಜಾಮೀನು ಕೋರಿ ವೈದ್ಯರು ಅರ್ಜಿ ಸಲ್ಲಿಸಿದ್ದು, ಜಾಮೀನು ಅರ್ಜಿ ವಿಚಾರಣೆ ನಡೆಸಿದ ಎರಡನೇ ಜಿಲ್ಲಾ ಅಪರ ಹಾಗೂ ಸತ್ರ ನ್ಯಾಯಾಲಯವು ಇಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.