ಮೇಲ್ಮನೆಯಲ್ಲಿ ವೀಣಾ ಪ್ರಶ್ನೆಗೆ ಸಚಿವರುಗಳ ಉತ್ತರ

ಮಡಿಕೇರಿ, ಡಿ. ೨೦: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ವಿದ್ಯುತ್ ಸಂಪರ್ಕ ಹೊಂದಿ ಮೀಟರ್ ಅಳವಡಿಸಿರುವ ಮನೆಗಳಿಗೆ ವಿದ್ಯುತ್ ಅಭಿವೃದ್ಧಿ ಶುಲ್ಕ ವಿಧಿಸಲಾಗುತ್ತಿಲ್ಲ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸ್ಪಷ್ಟಪಡಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಬಗ್ಗೆ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಸುನಿಲ್ ಕುಮಾರ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅನ್ವಯ ಹಾಲಿ ಇರುವ ಸ್ಥಾವರಗಳಿಗೆ ಹೊಸ ಅಥವಾ ಹೆಚ್ಚುವರಿ ಭಾರಕ್ಕೆ ಕೋರಿ ನಿಗಮಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅಂತಹ ಸ್ಥಾವರಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಮಾಹಿತಿ ಒದಗಿಸಿದರು.

ಪಡಿತರ ಚೀಟಿ ವಿತರಣೆ ಬಗ್ಗೆ ವೀಣಾ ಪ್ರಶ್ನೆಗೆ ಉತ್ತರಿಸಿದ ಆಹಾರ ಸಚಿವ ಉಮೇಶ್ ಕತ್ತಿ, ಕೊಡಗು ಜಿಲ್ಲೆಯಲ್ಲಿ ೨೦೨೧-೨೨ನೇ ಸಾಲಿನಲ್ಲಿ ಪಡಿತರ ಚೀಟಿಯನ್ನು ಕೋರಿ ೩೧೧೦ ಅರ್ಜಿಗಳು ಸ್ವೀಕೃತಗೊಂಡಿವೆ. ೧ ಪಡಿತರ ಚೀಟಿ ವಿತರಣೆಯಾಗಿದೆ. ಕೋವಿಡ್ ಪರಿಸ್ಥಿತಿ ಹಿನ್ನೆಲೆ ಪ್ರಕ್ರಿಯೆ ನಿಧಾನವಾಗಿದೆ. ಹಾಗೂ ಬಯೋಮೆಟ್ರಿಕ್ ಬಳಕೆಯನ್ನು ಹಿಂಪಡೆದಿರುವ ಕಾರಣ ಪಡಿತರ ಚೀಟಿಗಳನ್ನು ವಿತರಿಸುವ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿವರಿಸಿದರು.