ಕೂಡಿಗೆ, ಡಿ. ೧೯: ಸೋಮವಾರಪೇಟೆ ತಾಲೂಕಿನ ಅನೇಕ ಭಾಗಗಳಲ್ಲಿ ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೃಷಿ ಇಲಾಖೆಯ ಸಹಕಾರ ದೊಂದಿಗೆ ರೈತರಿಗೆ ನೀರಿನ ಸೌಲಭ್ಯಕ್ಕೆ ಅನುಕೂಲವಾಗಲು ಕಿಂಡಿ ಅಣೆಕಟ್ಟೆಯ ಯೋಜನೆ ರೂಪಿಸಲಾಗಿದೆ.

ಮಲೆನಾಡು ಪ್ರದೇಶದಲ್ಲಿ ಬೆಟ್ಟದಿಂದ ಹೆಚ್ಚು ನೀರು ತಗ್ಗುಪ್ರದೇಶದ ಕಡೆಗೆ ಹರಿಯುತ್ತದೆ. ಮಳೆಗಾಲ ಕಳೆದು ಎರಡು ತಿಂಗಳುಗಳ ನಂತರವೂ ಜೋಗು ಪ್ರದೇಶದಲ್ಲಿ ನೀರು ತೋಡುಗಳ ಮೂಲಕ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುತ್ತದೆ. ಆ ನೀರಿನ ಸಂಗ್ರಹ ಮಾಡುವ ಹಳೆ ಪದ್ಧತಿಯಂತೆ ನೀರು ಹರಿಯುವ ತೋಡು(ಕಿರು ಕೊಲ್ಲಿ)ಗೆ ಆ ಕಾಲುವೆಗೆ ಅನುಗುಣವಾಗಿ ಕಿಂಡಿ ಅಣೆಕಟ್ಟೆ ಅಂದರೆ ಸಿಮೆಂಟ್‌ನ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ಕಾಲುವೆಯಲ್ಲಿ ಒಂದೂವರೆಯಿAದ ಎರಡು ಮೀಟರ್‌ಗಳಷ್ಟು ಎತ್ತರದ ಕಟ್ಟಡವನ್ನು ಮೂರು ಕಡೆಗಳಲ್ಲಿ ಕಟ್ಟಿ ನೀರು ಕೆಳ ಭಾಗಕ್ಕೆ ಹೋಗದಂತೆ ಕಿಂಡಿಗಳಿಗೆ ಹಲಗೆಯನ್ನು ಅಳವಡಿಸುವುದರಿಂದ ತೋಡುಗಳಲ್ಲಿ ಸಣ್ಣ ಪ್ರಮಾಣದ ನೀರು ಸಂಗ್ರಹವಾಗುತ್ತದೆ.

ಮಳೆಗಾಲ ಕಳೆದು ಎರಡು ತಿಂಗಳ ನಂತರ ಕಿಂಡಿ ಅಣೆಕಟ್ಟೆಯ ಮೂಲಕ ನೀರು ಸಂಗ್ರಹವಾಗುವಾಗ ನೀರಿನ ಮಟ್ಟ ಏರುತ್ತದೆ. ಯೋಜನೆಯ ಪ್ರಯೋಜನ ಪಡೆಯುವ ರೈತ ಜಮೀನಿನಲ್ಲಿ ಎರಡು ಮೀಟರ್ ಆಳದಿಂದ ೬ ಮೀಟರ್‌ನವರಿಗೆ ನೀರು ಸಂಗ್ರಹವಾಗುತ್ತಿದೆ. ಇದರಿಂದಾಗಿ ಯೋಜನೆ ಪಡೆದ ರೈತರು ಬೇಸಿಗೆಗಾಲದಲ್ಲಿ ಅರೆ ಬೇಸಾಯ ಮಾಡಲು ಈ ಸಂಗ್ರಹದ ನೀರನ್ನು ಮೋಟಾರ್ ಬಳಸಿ ಪೈಪ್‌ಗಳ ಮೂಲಕ ಬಳಕೆ ಮಾಡಬಹುದಾಗಿದೆ ಎಂದು ಕುಶಾಲನಗರ ಕೃಷಿ ಇಲಾಖೆಯ ಸಂಪರ್ಕ ಕೇಂದ್ರ ಅಧಿಕಾರಿ ಅರುಣ ಮಾಹಿತಿ ಯಿತ್ತಿದ್ದಾರೆ.

ಈ ಮಾದರಿಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ತೋಡು ಪ್ರದೇಶದ ಜಮೀನಿನ ರೈತರು ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಅದೇ ರೀತಿಯಲ್ಲಿ ಯಡವನಾಡು, ಮತ್ತು ಗೋಣಿಮಾರೂರು ವ್ಯಾಪ್ತಿಯ ಕೆಲ ರೈತರು ಅಳವಡಿಕೆ ಮಾಡಿಕೊಂಡಿ ದ್ದಾರೆ. ಮಳೆಗಾಲದಲ್ಲಿ ಈ ಅಣೆಕಟ್ಟೆಗೆ ಹಲಗೆಯನ್ನು ಹಾಕುವುದಿಲ್ಲ. ಬಂದ ನೀರು ಸರಾಗವಾಗಿ ಹರಿದು ಹಳ್ಳ ಸೇರುತ್ತದೆ.

ಕೃಷಿ ಇಲಾಖೆಯ ಮೂಲಕ ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲು ಆಯಾ ವ್ಯಾಪ್ತಿಯ ರೈತರ ಬೇಡಿಕೆಯ ಅನುಗುಣವಾಗಿ ಆಯಾ ಪ್ರದೇಶಗಳ ಸ್ಥಳ ಪರಿಶೀಲನೆ ನಂತರ ಕ್ರಿಯಾ ಯೋಜನೆ ಮಾಡಿ ಅದರ ಆಧಾರದ ಮೇಲೆ ಗುತ್ತಿಗೆದಾರರ ಮೂಲಕ ಕಿಂಡಿ ಅಣೆಕಟ್ಟೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಇದರಿಂದಾಗಿ ಬೇಸಿಗೆ ಸಂದರ್ಭ ಹರಿದು ಹೋಗುವ ನೀರನ್ನು ತಡೆದು ಸದ್ಬಳಕೆ ಮಾಡಿಕೊಳ್ಳಲು ಉತ್ತಮವಾದ ಅವಕಾಶವಾಗಲಿದೆ. ಅಲ್ಲದೆ ಈ ವ್ಯಾಪ್ತಿಗಳ ಅಂತರ್ಜಲ ಹೆಚ್ಚಾಗುವುದು ಎಂದು ಅರುಣ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.