ವೀರಾಜಪೇಟೆ, ಡಿ. ೧೯: ಕದನೂರು ರೈತ ಜಾಗೃತಿ ಸಂಘದ ವತಿಯಿಂದ ವೀರಾಜಪೇಟೆಯ ಅರಣ್ಯ ವಲಯ ಕಚೇರಿಗೆ ತೆರಳಿ ಅರಣ್ಯಾಧಿಕಾರಿ ಚಕ್ರಪಾಣಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಇತ್ತೀಚೆಗೆ ಕೆಲವು ಪುಂಡಾನೆಗಳು ಗ್ರಾಮದಲ್ಲಿ ವಾಸ್ತವ್ಯ ಹೂಡಿ ತೆಂಗು, ಬಾಳೆ, ಅಡಕೆ, ಭತ್ತದ ಗದ್ದೆಗಳಿಗೆ ಹಾನಿಮಾಡಿ ಅಪಾರ ಪ್ರಮಾಣದ ನಷ್ಟ ಉಂಟುಮಾಡಿದ್ದು, ಪರಿಹಾರ ಹಣ ಸಮರ್ಪಕವಾಗಿ ದೊರಕಿರುವುದಿಲ್ಲ ಆದ್ದರಿಂದ ಮನವಿ ನೀಡಿದ್ದೇವೆ ಎಂದು ಸಂಘದ ಅಧ್ಯಕ್ಷ ಪಾಲೇಕಂಡ ಜೀವನ್ ಹೇಳಿದರು.

ಮನವಿ ಸ್ವೀಕರಿಸಿದ ಚಕ್ರಪಾಣಿ ಅವರು ಸಿಬ್ಬಂದಿಗಳನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿ ಸರ್ಕಾರದಿಂದ ಸಮರ್ಪಕವಾದ ಪರಿಹಾರ ನೀಡುವ ಭರವಸೆಯಿತ್ತರು.

ಈ ಸಂದರ್ಭ ಕದನೂರಿನ ರೈತ ಸಂಘದ ಸದಸ್ಯರು, ಊರಿನವರು ಹಾಜರಿದ್ದರು.