ಚೆಟ್ಟಳ್ಳಿ, ಡಿ. ೧೯: ಎಲ್ಲಾ, ಜಾತಿ, ಧರ್ಮವನ್ನು ಒಂದೇ ವೇದಿಕೆಯಲ್ಲಿ ತರಲು ಕ್ರೀಡೆಗೆ ಮಾತ್ರ ಸಾಧ್ಯ ಎಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಅಭಿಪ್ರಾಯಪಟ್ಟರು.

ಚೆಟ್ಟಳ್ಳಿಯ ಮೋದಿ ಭವನದಲ್ಲಿ ನಡೆದ ಕಂಡಕರೆ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಹಿಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಇರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ಕ್ರೀಡಾಪಟುಗಳಿಗೆ ಆಧುನಿಕವಾದ ಸುಸಜ್ಜಿತ ಎಲ್ಲಾ ವ್ಯವಸ್ಥೆಗಳು ಇದೆ. ಕ್ರೀಡೆಯಲ್ಲಿ ಆಸಕ್ತಿಯಿರುವ ಯುವಕರು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶಕ್ಕೆ ಒಳ್ಳೆಯ ಹೆಸರು ತರಲು ಪ್ರಯತ್ನಿಸಬೇಕೆಂದು ಹೇಳಿದರು.

ಈ ಸಂದರ್ಭ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರನ್ನು ಗಾಂಧಿ ಯುವಕ ಸಂಘದಿAದ ಸನ್ಮಾನಿಸಿ, ಗೌರವಿಸಲಾಯಿತು.

ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದರು ಹಾಗೂ ೭೦ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ, ಅಬ್ದುಲ್ ಗಫೂರ್ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್ ಇದ್ದರು. ಕಾರ್ಯಕ್ರಮವನ್ನು ಬಿಡ್ಡಿಂಗ್ ಪ್ರಕ್ರಿಯೆಯ ಮುಖ್ಯಸ್ಥ ಉಮರುಲ್ ಫಾರೂಖ್ ನಿರೂಪಿಸಿದರು.