ಸೋಮವಾರಪೇಟೆ, ಡಿ.೧೮: ಇಲ್ಲಿನ ಟೀಂ ಎಬಿಡಿ ವತಿಯಿಂದ ಇದೇ ಪ್ರಥಮವಾಗಿ ಲಂಡನ್‌ನಲ್ಲಿ ನಡೆಯುವಂತಹ ವಿನೂತನ ಮಾದರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಹಾಗೂ ದ್ವಿಚಕ್ರ-ನಾಲ್ಕು ಚಕ್ರದ ವಾಹನಗಳ ವಿವಿಧ ಸ್ಪರ್ಧೆಗೆ ಚಾಲನೆ ನೀಡಲಾಯಿತು.

ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಿನಿ ಪ್ರಿಮಿಯರ್ ಲೀಗ್ ಹೆಸರಿನಲ್ಲಿ ಪಂದ್ಯಾವಳಿ ಆಯೋಜಿಸಿದ್ದು, ಸ್ಥಳೀಯ ಮೈದಾನದಲ್ಲಿ ಆಟವಾಡಿದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಐಪಿಎಲ್ ಮಾದರಿಯಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿದ್ದು, ಆರ್‌ಸಿಬಿ ಬಜೆಗುಂಡಿ, ಸಿಕೆಎಸ್ ಗಾಂಧಿನಗರ, ಕೆ.ಕೆ.ಆರ್. ಬಳಗುಂದ, ಡಿ.ಸಿ. ಹೊಸಬೀಡು, ಎಂ.ಐ. ಕಕ್ಕೆಹೊಳೆ, ಎಸ್‌ಆರ್‌ಕೆ ಕರ್ಕಳ್ಳಿ, ಆರ್.ಆರ್. ಕ್ಲಬ್‌ರಸ್ತೆ, ಪಂಜಾಬ್ ಇಲೆವೆನ್ ಕಲ್ಕಂದೂರು ತಂಡಗಳು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿವೆ. ಕ್ರೀಡಾಕೂಟಕ್ಕೆ ರೋಟರಿ ಸಂಸ್ಥೆಯ ಮಾಜೀ ಸಹಾಯಕ ರಾಜ್ಯಪಾಲ ಪಿ.ಕೆ. ರವಿ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಮಾತನಾಡಿ, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತಳಪಾಯವಾಗಿದ್ದು, ಕ್ರೀಡಾ ಸ್ಫೂರ್ತಿ ಯೊಂದಿಗೆ ಭಾಗಿಯಾಗಬೇಕು ಎಂದರು. ಇದರೊಂದಿಗೆ ವಾಹನಗಳನ್ನು ಚಲಾಯಿಸುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪೊಲೀಸರಿಗೆ ಹೆದರಿ ಹೆಲ್ಮೆಟ್ ಧರಿಸುವುದಕ್ಕಿಂತ ನಿಮ್ಮ ತಲೆಯನ್ನು ಉಳಿಸಿಕೊಳ್ಳಲು ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ಕಿವಿಮಾತು ನುಡಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ಲು, ಚೌಡ್ಲು ಗ್ರಾ.ಪಂ. ಸದಸ್ಯರುಗಳಾದ ನತೀಶ್ ಮಂದಣ್ಣ, ಸುರೇಶ್ ಶೆಟ್ಟಿ, ಪ್ರಮುಖರಾದ ಕಿಬ್ಬೆಟ್ಟ ಮಧು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕ್ರಿಕೆಟ್‌ನಲ್ಲಿ ವಿಜೇತ ತಂಡಗಳಿಗೆ ರೋಲಿಂಗ್ ಟ್ರೋಫಿಯೊಂದಿಗೆ ಆಕರ್ಷಕ ವಿನ್ನರ್ ಹಾಗೂ ರನ್ನರ್ ಟ್ರೋಫಿ, ಪ್ರಥಮ ರೂ.೬೬೬೬ ನಗದು, ದ್ವಿತೀಯ ೩೩೩೩ ನಗದು ಹಾಗೂ ವೈಯುಕ್ತಿಕ ಟ್ರೋಫಿಗಳನ್ನು ನೀಡಲಾಗುವುದು ಎಂದು ಟೀಂ ಎಬಿಡಿ ಅಧ್ಯಕ್ಷ ಬಿ.ಆರ್. ಹರೀಶ್ ತಿಳಿಸಿದರು.

ನಂತರ ಮಾರುತಿ ೮೦೦ ಕಾರು ಹಾಗೂ ೨ ಸ್ಟೊçÃಕ್ ವಿಂಟೇಜ್ ವಾಹನಗಳ ಪ್ರದರ್ಶನ ಸ್ಪರ್ಧೆ, ಯಮಹಾ ಆರ್‌ಎಕ್ಸ್ ಬೈಕ್‌ಗಳ ಪ್ರದರ್ಶನ ಹಾಗೂ ನಿಧಾನಗತಿಯ ಚಾಲನೆ ಸ್ಪರ್ಧೆ, ಶಾಲಾ ವಿದ್ಯಾರ್ಥಿ ಗಳಿಗೆ ನಿಧಾನ ಗತಿಯಲ್ಲಿ ಬೈಸಿಕಲ್ ಚಾಲನೆ ಸ್ಪರ್ಧೆ, ೧೬ ವಯೋಮಾನ ಮೇಲ್ಪಟ್ಟವರಿಗೆ ೧೦೦೦ ಮೀಟರ್ ಓಟದ ಸ್ಪರ್ಧೆಗಳು ನಡೆದವು.

ಇದಕ್ಕೂ ಮುನ್ನ ಪಟ್ಟಣದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ವಾಹನ ಜಾಥಾ ನಡೆಯಿತು. ಎಬಿಡಿ ತಂಡದ ನಾಯಕ ಎಸ್.ಐ. ಚೇತನ್, ಉಪಾಧ್ಯಕ್ಷ ಬಿ.ಆರ್. ಮಂಜು, ಖಜಾಂಚಿ ಆದರ್ಶ್ ಯಡವನಾಡು, ನಿರ್ದೇಶಕ ವಿಕಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.