ಮಡಿಕೇರಿ, ಡಿ. ೧೭: ಪೊನ್ನಂಪೇಟೆ ತಾಲೂಕು ಬೇಗೂರು ಗ್ರಾಮದಲ್ಲಿ ಹರಿಯುತ್ತಿರುವ ಬರಪೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಪೊಲೀಸರು ಹಾಗೂ ಗೋಣಿಕೊಪ್ಪ ವೃತ್ತ ನಿರೀಕ್ಷಕರು ಯಶಸ್ವಿಯಾಗಿದ್ದಾರೆ.

ತಾ. ೧೫ ರಂದು ಪೊನ್ನಂಪೇಟೆ ಬೇಗೂರು ನಿವಾಸಿ ಮಲ್ಲಂಡ ಪ್ರಕಾಶ್ ಎಂಬವರು ಬೇಗೂರು ಗ್ರಾಮದಲ್ಲಿ ಹರಿಯುತ್ತಿರುವ ಬರಪೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ಡಿಸಿಐಬಿ ಪೊಲೀಸರು ಹಾಗೂ ಗೋಣಿಕೊಪ್ಪ ವೃತ್ತ ನಿರೀಕ್ಷಕರು ಬೇಗೂರು ಗ್ರಾಮದ ಬರಪೊಳೆಯಿಂದ ಮರಳು ತೆಗೆಯಲು ಬಳಸಿದ ಎರಡು ಕಬ್ಬಿಣದ ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿ ಸಮಯದಲ್ಲಿ ಮರಳು ತೆಗೆಯುತ್ತಿದ್ದವರು ತಪ್ಪಿಸಿಕೊಂಡಿರುತ್ತಾರೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ಉಪಾಧೀಕ್ಷಕರು ವೀರಾಜಪೇಟೆ ಉಪವಿಭಾಗ ಅವರ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆದಳದ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ಮತ್ತು ಗೋಣಿಕೊಪ್ಪ ವೃತ್ತ ನಿರೀಕ್ಷಕರು ಹಾಗೂ ಪೊನ್ನಂಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.