ಕೂಡಿಗೆ, ಡಿ. ೧೭: ಜಿಲ್ಲೆಯ ಅನೇಕ ರೈತರು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಕಳೆದ ಮೂರು ವರ್ಷಗಳಿಂದಲೂ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯ ಬೇಸಾಯ ಮಾಡುತ್ತಾ ಸಾವಿರಾರು ರೂಪಾಯಿ ಖರ್ಚು ಮಾಡಿ ಬೇಸಾಯ ಮಾಡಿದರೂ ಈ ಬಾರಿ ಬೆಲೆಯ ಕುಸಿತದ ಜೊತೆಗೆ ಕೊಳೆ ರೋಗ ಮತ್ತು ಕಡ್ಡಿ ರೋಗ ಹೆಚ್ಚಾಗಿ ರೈತರು ಆತಂಕ ಪಡುವಂತಹ ಪ್ರಸಂಗ ಎದುರಾಗಿದೆ. ಮಳೆಯಿಂದಾಗಿ ಈ ಬಾರಿ ಕೊಳೆ ರೋಗ ಹೆಚ್ಚಾಗಿ ದಿನಕಳೆದಂತೆ ರೋಗ ಬೆಳೆಗೆ ಹರಡುವುದರ ಜೊತೆಗೆ ಬೆಲೆಯ ಏರಿಳಿತದಿಂದ ಶುಂಠಿ ಬೆಳೆಯು ಜಮೀನಿನಲ್ಲಿ ಹಾಳಾಗುತ್ತಿದೆ. ಇದರ ಜೊತೆಯಲ್ಲಿ ಎರಡು ತಿಂಗಳುಗಳಿAದ ಇದ್ದ ಬೆಲೆ ಕಳೆದ ಎರಡು ದಿನಗಳಿಂದ ಮತ್ತೆ ೧೦೦ ರೂ ಇಳಿದಿದೆ.
ರೈತರು ಬೆಳೆ ಕೀಳಲು ಪ್ರಾರಂಭ ಮಾಡಿದರೂ ಸಹ ಮಾರುಕಟ್ಟೆ ಯವರು ಕೊಳ್ಳಲು ಸಿದ್ಧರಿಲ್ಲದಂತಹ ಪ್ರಸಂಗ ಎದುರಾಗುತ್ತಿದೆ.
ಈ ಸಾಲಿನಲ್ಲಿ ಜಿಲ್ಲೆಯ ರೈತರು ಕಳೆದ ಸಾಲಿಗಿಂತ ಶುಂಠಿ ಬೆಳೆಗೆ ಉತ್ತಮವಾದ ಬೆಲೆ ಬರಬಹುದೆಂದು ಅಧಿಕ ಹಣ ಶುಂಠಿ ಬೀಜಕ್ಕೆ, ಭೂಮಿಗೆ ಮತ್ತು ನೀರಿನ ವ್ಯವಸ್ಥೆಗೆ, ಗೊಬ್ಬರಕ್ಕೆ ಖರ್ಚು ಮಾಡಿದ್ದಾರೆ. ಗಿಡಗಳು ದಿನಗಳೆದಂತೆ ಒಣಗಿ ನಂತರ ರೋಗ ಇಡಿ ಜಮೀನಿನಲ್ಲಿ ಹರಡಲು ಪ್ರಾರಂಭವಾಗಿ ಬೆಳೆ ಕೀಳುವ ಹಂತಕ್ಕೆ ಬಂದರೂ ಸಹ ಬೆಲೆ ಏರಿಕೆ ಮಾತ್ರ ಆಗಿಲ್ಲ.
ಕಳೆದ ವರ್ಷಗಳಲ್ಲಿ ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ಶುಂಠಿ ಬೇಸಾಯಕ್ಕೆ ಸಿದ್ದತೆಗಳನ್ನು ಮಾಡಿಕೊಂಡು ಬೇಸಾಯ ಮಾಡಲಾಗಿತ್ತು. ಆದರೆ ಈ ಸಾಲಿನಲ್ಲಿ ಡಿಸೆಂಬರ್ ತಿಂಗಳು ಕಳೆಯುತ್ತಾ ಬಂದರೂ ಸಹ ಬೆಲೆಯಿಲ್ಲದೆ ಶುಂಠಿ ಬೆಳೆ ಇನ್ನೂ ಸಹ ಜಮೀನಿನಲ್ಲಿ ಇದೆ. ಕಳೆದ ಸಾಲಿನಲ್ಲಿ ಶುಂಠಿ ಬಿತ್ತನೆ ಬೀಜಕ್ಕೆ ೩ ಸಾವಿರದಿಂದ ೪ ಸಾವಿರ ರೂ. ಗಳಷ್ಟು ಬೆಲೆ ಇತ್ತು. ಆದರೆ ಈ ಬಾರಿ ಬಿತ್ತನೆ ಬೀಜದ ಬೆಲೆಯು ಸಾವಿರ ರೂ. ದಾಟುವುದಿಲ್ಲ ಎಂದು ಶುಂಠಿ ಮಾರಾಟ ಗಾರರು ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಒಂದು ಚೀಲ ಶುಂಠಿ ೬೦ ಕೆ.ಜಿ.ಗೆ ಮೂರು ಸಾವಿರದಿಂದ ನಾಲ್ಕು ಸಾವಿರ ಬೆಲೆ ಇತ್ತು. ಆದರೆ ಕಳೆದ ಎರಡೂ ವರ್ಷಗಳಿಂದಲೂ ಹೊಸ ಶುಂಠಿಗೆ ರಾಜ್ಯ ಮತ್ತು ಅಂತರರಾಜ್ಯ ಮಾರುಕಟ್ಟೆಯಲ್ಲಿ ಕೇವಲ ೫೫೦ ರಿಂದ ೭೦೦ ರವರೆಗೆ ಮಾತ್ರ ಬೆಲೆ ಸಿಗುತ್ತಿದೆ. ಹಳೆಯ ಶುಂಠಿಗೆ ೧,೨೦೦-೧,೩೦೦ ರಷ್ಟು ಬೆಲೆ ಇದೆ. ಕಳೆದ ಎರಡು ತಿಂಗಳುಗಳಿAದ ಇದ್ದ ಬೆಲೆ ೭೦೦ ಇದೀಗ ೬೦೦ ರೂ.ಗಳಿಗೆ ಇಳಿದಿದೆ. ಜಮೀನಿನಲ್ಲಿ ಶುಂಠಿ ಬೆಳೆಯನ್ನು ಬಿಡುವುದಕ್ಕಿಂತ, ಕಿತ್ತು ಸಿಕ್ಕಿದ ಬೆಲೆಗೆ ಮಾರಾಟ ಮಾಡಿ ಬದಲಿ ಶುಂಠಿ ಬೇಸಾಯ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಇದೆ ಎಂದು ಶುಂಠಿ ಬೆಳೆಗಾರರಾದ ವಿಶ್ವನಾಥ, ಜಗದೀಶ್, ಅನಿಲ್, ಪ್ರಕಾಶ್, ಶಿವಪ್ರಸಾದ್, ಶಿವಣ್ಣ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಳೆಯ ನಡುವೆಯೂ ಶುಂಠಿ ಬೆಳೆಯನ್ನು ಕಿತ್ತು ಶುಂಠಿ ತೊಳೆಯುವ ಯಂತ್ರದ ಮೂಲಕ ತೊಳೆದು ಮೂಟೆಗಳಲ್ಲಿ ತುಂಬಿಸಿ ಹೊರ ರಾಜ್ಯದ ಮಾರುಕಟ್ಟೆಗೆ ಸಾಗಾಣಿಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಆದರೆ ಬೆಲೆಯ ಕುಸಿತದಿಂದಾಗಿ ಖರ್ಚು ಮಾಡಿದ ಹಣವು ಸೀಗುತ್ತಿಲ್ಲ್ಲ ಎಂದು ಶುಂಠಿ ಬೆಳೆದ ಅನೇಕ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.