ಆಲೂರು-ಸಿದ್ದಾಪುರ, ಡಿ. ೧೭: ಅರೆಭಾಷೆ ಗೌಡ ಜನಾಂಗದ ಮಾತೃಭಾಷೆ ಮತ್ತು ಸಾಹಿತ್ಯ ಬೆಳವಣಿಗೆ, ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದಕ್ಕೆ ಸ್ಥಾಪಿತವಾದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪೂರಕ ವೇದಿಕೆಯಾಗಿದೆ ಎಂದು ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಅಭಿಪ್ರಾಯಪಟ್ಟರು.
ಅವರು ಸಂಗಯ್ಯನಪುರ ಅರೆಭಾಷೆ ಗೌಡ ಸಮಾಜದಲ್ಲಿ ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವತಿಯಿಂದ ನಡೆದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರೆಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸಲು ಸ್ಥಾಪನೆಯಾದ ಅಕಾಡೆಮಿಯ ನೆನಪಿಗಾಗಿ ಅರೆಭಾಷೆ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸಲಾಗುತ್ತದೆ. ಅರೆಭಾಷೆ, ಸಾಹಿತ್ಯ ಸಂಸ್ಕೃತಿ ಪದ್ಧತಿ ಮುಂತಾದ ಅರೆಭಾಷೆ ಗೌಡ ಜನಾಂಗದ ಸಂಪ್ರದಾಯಗಳನ್ನು ಅಭಿವೃದ್ಧಿಪಡಿಸಲು ಅಕಾಡೆಮಿಯ ನಿರ್ದೇಶನದಂತೆ ಪ್ರತಿಯೊಂದು ಅರೆಭಾಷೆ ಸಮಾಜದ ಮೂಲಕ ಕಾರ್ಯಕ್ರಮಗಳು ನಡೆಯುತ್ತಿರ ಬೇಕಾಗುತ್ತದೆ ಎಂದರು. ಅರೆಭಾಷೆ ಸಮೂದಾಯದ ಪರಂಪರೆ ಪದ್ಧತಿಗಳ ಬಗ್ಗೆ ರಸಪ್ರಶ್ನೆ ಹಾಗೂ ಕಾರ್ಯಾಗಾರಗಳಲ್ಲಿ ಸಮುದಾಯದ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಅರೆಭಾಷೆ ಸಂಸ್ಕೃತಿಯನ್ನು ಬೆಳೆಸಬೇಕು ಹಾಗೂ ಸಮಾಜದ ಇತರೆ ಸಮುದಾಯ ಬಾಂಧವರಿಗೂ ಮಾದರಿಯಾಗಿಬೇಕೆಂದರು.
ಅರೆಭಾಷೆ ಗೌಡ ಸಮಾಜದ ಹಿರಿಯ ಮುಖಂಡ ಭಟ್ಯನ ಈರಪ್ಪ ಮಾತನಾಡಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಸಮುದಾಯದ ಹಿರಿಯರು, ಪ್ರಮುಖರು ಮತ್ತು ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಪ್ರಯತ್ನ ಮತ್ತು ಪರಿಶ್ರಮ ಅಪಾರವಾದದ್ದು ಈ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿಯನ್ನು ಬೆಳೆಸಲು ಸಮುದಾಯದ ಪ್ರತಿಯೊಬ್ಬರೂ ಸಮಾಜದ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿದೆ ಎಂದರು.
ಅರೆಭಾಷೆ ಗೌಡ ಸಮಾಜದ ಕಾರ್ಯದರ್ಶಿ ಕುಯುಮುಡಿ ಜಯಕುಮಾರ್ ಮಾತನಾಡಿ, ಅರೆಭಾಷೆ ಸಾಹಿತ್ಯ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಯವರಿಗಾಗಿ ಉಳಿಸಿ ಬೆಳೆಸುವುದರ ಬಗ್ಗೆ ಸಮಾಜದ ಈಗಿನವರು ಆತ್ಮಾಲೋಕನ ಮಾಡಿಕೊಳ್ಳುವ ಮೂಲಕ ಅರೆಭಾಷೆ ಸಂಸ್ಕೃತಿಯನ್ನು ಬೆಳೆಸುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಅಮೆಮನೆ ರಾಮಣ್ಣ, ಪರ್ಲಕೋಟಿ ಶೈಲ ಸತೀಶ್, ಪಟ್ಟಡ ಲೀಲಾಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅರೆಭಾಷೆ ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು.