ಕುಶಾಲನಗರ, ಡಿ. ೧೭: ಗುಣಮಟ್ಟವಿಲ್ಲದ ಆಹಾರ ಪದಾರ್ಥಗಳನ್ನು ಸರಬರಾಜು ಅಥವಾ ವಿತರಣೆ ಮಾಡಿದಲ್ಲಿ ಭಾರೀ ಪ್ರಮಾಣದ ಮೊತ್ತದ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕೊಡಗು ಜಿಲ್ಲಾ ಅಂಕಿತ ಅಧಿಕಾರಿ ಡಾ. ಅನಿಲ್ ಧವನ್ ಮಾಹಿತಿ ನೀಡಿದ್ದಾರೆ.ಚೇಂಬರ್ ಆಫ್ ಕಾಮರ್ಸ್ ಕುಶಾಲನಗರ ಸ್ಥಾನೀಯ ಸಮಿತಿ ಆಶ್ರಯದಲ್ಲಿ ವರ್ತಕರಿಗೆ ನಡೆದ ಮಾಹಿತಿ ಕಾರ್ಯಾಗಾರ ಮತ್ತು ವಿಶೇಷ ನೋಂದಣಿ ಮತ್ತು ಪರವಾನಿಗೆ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ವರ್ತಕರು, ಆಹಾರ ಪದಾರ್ಥಗಳ ಮಾರಾಟಗಾರರು, ವಿತರಕರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಇದೇ ಸಂದರ್ಭ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಆಹಾರ ಪದಾರ್ಥಗಳ ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಹಾಗೂ ಪರವಾನಿಗೆ ಪಡೆದಿರುವ ಬಗ್ಗೆ ತಿಳಿಸಿದರು.
ವರ್ತಕರಿಗೆ ಹೆಚ್ಚಿನ ಮಾಹಿತಿ ಒದಗಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಮಾನವನ ಸೇವನೆಗೆ ಯೋಗ್ಯವಾದ ಆಹಾರ ಪೂರೈಸುವುದು ಮೂಲ ಉದ್ದೇಶವಾಗಿದೆ. ವರ್ತಕರು ವಹಿವಾಟಿನ ಬಗ್ಗೆ ಮತ್ತು ಆಹಾರ ಮಾರಾಟ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಆಹಾರ ಸಂಸ್ಕರಣೆ, ಸಂಗ್ರಹ, ವಿತರಣೆ ಮಾರಾಟದಲ್ಲಿ ಪಾಲಿಸಬೇಕಾದ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರಲ್ಲದೆ, ಕಾಯ್ದೆ ಉಲ್ಲಂಘನೆ ಆದಲ್ಲಿ ಭಾರೀ ಪ್ರಮಾಣದ ಮೊತ್ತದ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೊಡಗು ಜಿಲ್ಲೆಯಲ್ಲಿ ಕಾಯ್ದೆ ಉಲ್ಲಂಘನೆ ಮಾಡಿದ ಕೆಲವು ವ್ಯಾಪಾರಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಕುಶಾಲನಗರ ಕನ್ನಿಕಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯ ದರ್ಶಿ ರವೀಂದ್ರ ರೈ, ಜಿಲ್ಲಾ ನಿರ್ದೇಶಕ ಎಂ.ಡಿ. ರಂಗಸ್ವಾಮಿ, ಮಾಜಿ ನಿರ್ದೇಶಕ ಸತೀಶ್, ಸಹ ಕಾರ್ಯದರ್ಶಿ ಕೆ.ಎಸ್. ನಾಗೇಶ್ ಮತ್ತಿತರರಿದ್ದರು.