ಮಡಿಕೇರಿ, ಡಿ. ೧೭: ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗವು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರನ್ನು ಭೇಟಿ ಮಾಡಿ, ೧೯೨/ಂ ಭೂಕಬಳಿಕೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಾದ್ಯಂತ ಗ್ರಾಮೀಣ ಭಾಗದ ಕೃಷಿ ಜಮೀನನ್ನು ಹೊರಗಿಡಬೇಕಾಗಿ ಹಾಗೂ ಈ ಹಿಂದಿನ ಸರ್ಕಾರವು ೧೦ ಎಕರೆವರೆಗಿನ ಒತ್ತುವರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಲು ನಿಯಮಗಳನ್ನು ರೂಪಿಸಲಾಗಿತ್ತು. ಅದನ್ನು ಕಾರ್ಯಗತಗೊಳಿಸಿಕೊಡುವಂತೆ ಮನವಿ ಮಾಡಿತು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ, ಕಾಫಿ ಬೆಳೆಗಾರರ ೧೦ ಹೆಚ್.ಪಿ.ವರೆಗಿನ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವಂತೆ ಒತ್ತಾಯಿಸಲಾಯಿತು.
ಕಳೆದ ೪-೫ ವರ್ಷಗಳಿಂದಲೂ ನಿರಂತರವಾದ ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕಾಫಿಕೃಷಿ ಸಂಕಷ್ಟದಲ್ಲಿ ಇದ್ದು, ಜೊತೆಗೆ ಈ ವರ್ಷ ನಿರಂತರವಾದ ಮಳೆಯಿಂದ ಕಾಫಿಕುಯ್ಲಿನ ಸಂದರ್ಭದಲ್ಲಿ ಕಾಫಿ ಫಸಲಿನಲ್ಲಿ ನಷ್ಟವಾಗಿದ್ದು, ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಿ, ಅಸಲನ್ನು ಮರುಹೊಂದಾಣಿಕೆ ಮಾಡಿ, ಕಂತುಗಳ ರೂಪದಲ್ಲಿ ಪಾವತಿಸಲು ಅವಕಾಶ ಕಲ್ಪಿಸಿಕೊಟ್ಟು ಅನುಕೂಲ ಮಾಡಿಕೊಡಬೇಕೆಂದು ನಿಯೋಗ ಒತ್ತಾಯಿಸಿದಾಗ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಈ ವಿಚಾರವನ್ನು ಪರಿಶೀಲಿಸಿ, ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಕಾಡಾನೆ ದಾಳಿ ತಡೆಗೆ ಶಾಶ್ವತ ಪರಿಹಾರ ಅಸಾಧ್ಯ ಎಂಬುದಾಗಿ ಹೇಳಿದರು.
ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ||ಹೆಚ್.ಟಿ.ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ವಿಶೇಷ ಪ್ರತಿನಿಧಿ ಎಂ.ಹೆಚ್.ಪ್ರಕಾಶ್, ಕೋಮಾರ್ಕ್ ಮಾಜಿ ಅಧ್ಯಕ್ಷ ಡಿ.ಎಸ್.ರಘು ಇದ್ದರು.