ಮಡಿಕೇರಿ, ಡಿ. ೧೬: ದಕ್ಷಿಣ ಕೊಡಗಿನ ಎಲ್ಲಾ ಭಾಗಗಳಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚಿನ ಮಳೆಯಾದ ಪರಿಣಾಮ ಮಣ್ಣಿನಲ್ಲಿನ ಖನಿಜ ಮತ್ತು ಲವಣಾಂಶಗಳಲ್ಲಿ ಕೊರತೆ ಕಂಡು ಬರುವ ಸಾಧ್ಯತೆಗಳಿರುವುದರಿಂದ, ಮಣ್ಣಿನ ರಸಸಾರದಲ್ಲಿ ವ್ಯತ್ಯಯ ಉಂಟಾಗಿ ನೀಡುವ ಗೊಬ್ಬರವನ್ನು ಗಿಡಗಳು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲಾಗದೆ ಕಾಫಿ ಇಳುವರಿಯಲ್ಲಿ ವ್ಯತ್ಯಯವಾಗುವುದರ ಜೊತೆಗೆ ವರ್ಷವಿಡೀ ನಾವುಗಳು ಕೈಗೊಳ್ಳುವ ಎಲ್ಲಾ ಕೃಷಿ ಚಟುವಟಿಕೆಗಳು ವ್ಯರ್ಥವಾಗುತ್ತವೆ.

ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆಯ ಮಹತ್ವವನ್ನರಿತು, ವೈಜ್ಞಾನಿಕವಾಗಿ ಪರೀಕ್ಷಾಧಾರದ ಮೇಲೆ ನೀಡುವ ಫಲಿತಾಂಶವನ್ನಾಧರಿಸಿ ತಮ್ಮ ತೋಟಗಳಿಗೆ ಸುಣ್ಣ ಮತ್ತು ಗೊಬ್ಬರವನ್ನು ನೀಡುವುದು ಅತೀ ಅವಶ್ಯಕವಾಗಿರುತ್ತದೆ. ಈಗಾಗಲೇ ರೋಬಸ್ಟಾ ಕಾಫಿಯ ಕೊಯ್ಲು ಪ್ರಾರಂಭವಾಗಿದ್ದು, ಕೊಯ್ಲಿನ ನಂತರ ಎಲ್ಲಾ ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆ ಮಾಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಮಣ್ಣು ಪರೀಕ್ಷೆಗೆ ಮಣ್ಣಿನ ಮಾದರಿಯನ್ನು ತೆಗೆಯುವ ವಿಧಾನದ ಬಗ್ಗೆ ಮತ್ತು ಹೆಚ್ಚಿನ ಮಾಹಿತಿಗೆ ಕಾಫಿ ಮಂಡಳಿ, ಗೋಣಿಕೊಪ್ಪಲು ಸಂಪರ್ಕಿಸಲು ಕಾಫಿ ಮಂಡಳಿಯ ಉಪನಿರ್ದೇಶಕರು ಕೋರಿದ್ದಾರೆ.