ಕುಶಾಲನಗರ ಡಿ. ೧೬: ಹನುಮ ಜಯಂತಿ ಅಂಗವಾಗಿ ಕುಶಾಲನಗರ ದಲ್ಲಿ ಅದ್ಧೂರಿ ಕಾರ್ಯಕ್ರಮಗಳು ಜರುಗಿದವು.

ಶ್ರೀ ರಾಮಾಂಜನೇಯ ಉತ್ಸವ ಸಮಿತಿ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಶ್ರೀ ಆಂಜನೇಯ ಸೇವಾ ಸಮಿತಿ ರಥಬೀದಿ ಆಶ್ರಯದಲ್ಲಿ ಕುಶಾಲನಗರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ ೩೬ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕರಾದ ಬಿ ಎಸ್ ರಾಧಾಕೃಷ್ಣ ನೇತೃತ್ವದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿದವು.

ಜಯಂತಿ ಅಂಗವಾಗಿ ಎರಡು ದಿನಗಳ ಕಾಲ ದೇವಾಲಯದಲ್ಲಿ ಪವಮಾನ ಹೋಮ, ಪಂಚಾಮೃತ ಅಭಿಷೇಕ, ಸ್ವಾಮಿಗೆ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಭಕ್ತಾದಿಗಳಿಗೆ ಪಾನಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಂಜೆ ದೇವಾಲಯದಿಂದ ಉತ್ಸವ ಮೂರ್ತಿ ಮೆರವಣಿಗೆ ಹೊರಟು ರಥಬೀದಿ ಮೂಲಕ ಪಟ್ಟಣದ ಮುಖ್ಯ ರಸ್ತೆಯಲ್ಲಿ ತೆರಳಿ ಬೈಚನಹಳ್ಳಿ ತನಕ ಸಾಗಿತು. ಮಂಗಳೂರಿನ ಹುಲಿವೇಷಧಾರಿ ತಂಡದ ಸದಸ್ಯರು ಕುಣಿದು ನೋಡುಗರ ಮನ ಸೆಳೆದರು. ಯುವಕ-ಯುವತಿಯರು ವಾಲಗದ ರಾಗಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಕಂಡುಬAತು. ಗಣಪತಿ ದೇವಾಲಯದ ಮುಂಭಾಗ ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ಸವಮೂರ್ತಿ ಪಟ್ಟಣದ ಹೃದಯ ಭಾಗಕ್ಕೆ ಬಂದ ಸಂದರ್ಭ ಸಿಡಿಮದ್ದುಗಳನ್ನು ಸಿಡಿಸಿದರು.

ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ೫ ಪೊಲೀಸ್ ವೃತ್ತ ನಿರೀಕ್ಷಕರು, ೧೧ ಮಂದಿ ಸಬ್ ಇನ್ಸ್ಪೆಕ್ಟರ್‌ಗಳು ಸೇರಿದಂತೆ ಸುಮಾರು ೨೫೦ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲೆಯ ವಿವಿಧೆಡೆಯಿಂದ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಅಲ್ಲದೆ ಡಿಎಆರ್ ಮತ್ತು ಕೆಎಸ್‌ಆರ್‌ಪಿ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಡಿವೈಎಸ್ಪಿ ಶೈಲೇಂದ್ರ ತಿಳಿಸಿದ್ದಾರೆ. ಪಟ್ಟಣದ ಗಡಿಭಾಗಗಳಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದ್ದ ದೃಶ್ಯ ಕಂಡುಬAದಿತು. ಕೊಡಗು ಮೈಸೂರು ಗಡಿಭಾಗದ ಕೊಪ್ಪ ವ್ಯಾಪ್ತಿಯಲ್ಲಿ ಕೂಡ ಮೈಸೂರು ಭಾಗದ ಪೊಲೀಸರನ್ನು ಅಳವಡಿಸಿ ಎಲ್ಲ ವಾಹನಗಳ ಮಾಹಿತಿ ಪಡೆಯುತ್ತಿದ್ದ ದೃಶ್ಯ ಗೋಚರಿಸಿತು.

ಸಂಜೆ ವೇಳೆಗೆ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.

ಆಂಜನೇಯ ಸೇವಾ ಸಮಿತಿಯ ವಿ ಡಿ ಪುಂಡರೀಕಾಕ್ಷ , ರಾಜೀವ್, ಜಗದೀಶ್, ವಿಜಯ, ಆಂಜನೇಯ ಸೇವಾ ಸಮಿತಿಯ ಪ್ರಶಾಂತ್, ಅನುದೀಪ್, ಪ್ರವೀಣ್, ಜನಾರ್ಧನ್, ಮಹೇಶ್ ಮತ್ತು ಉತ್ಸವ ಸಮಿತಿಯ ಪದಾಧಿಕಾರಿಗಳು ಇದ್ದರು.