ಭಾಗಮಂಡಲ, ಡಿ.೧೩ : ತಾ. ೧೭ರಿಂದ ಎರಡು ದಿನಗಳ ಕಾಲ ನಡೆಯಲಿರುವ ಕಾವೇರಿ ನದಿ ಉತ್ಸವ ಸಂಬAಧ ಭಾಗಮಂಡಲದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಕಾವೇರಿ ನೀರಾವರಿ ನಿಗಮದ ಆಶ್ರಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುವ ಕಾವೇರಿ ನದಿ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಭಾಗಮಂಡಲ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎನ್. ಬಿ ಚೆನ್ನಕೇಶವ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಡಿಸೆಂಬರ್ ೧೭ರಂದು ನಡೆಯುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಎಂ.ಡಿ. ನಾಗೇಶ್ ನದಿಯ ಸಂರಕ್ಷಣೆ ಮತ್ತು ಸ್ವಚ್ಛತೆ ಕುರಿತಂತೆ ಉದ್ದೇಶ ಹೊಂದಿರುವ ಕಾವೇರಿ ನದಿ ಉತ್ಸವದ ಯಶಸ್ಸಿಗೆ ನಾಗರಿಕರು ಕೈಜೋಡಿಸಬೇಕೆಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಪ್ರಮುಖರು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದ ಅಂಗವಾಗಿ ನದಿ ತಟಗಳ ಹಾಗೂ ಗ್ರಾಮ ವ್ಯಾಪ್ತಿಯ ಸ್ವಚ್ಛತಾ ಕಾರ್ಯಕ್ರಮ, ನಂತರ ನದಿ ಉತ್ಸವಕ್ಕೆ ತಲಕಾವೇರಿ ಕ್ಷೇತ್ರದಲ್ಲಿ ಚಾಲನೆ ನೀಡುವುದು. ಭಾಗಮಂಡಲದಲ್ಲಿ ವೇದಿಕೆ ಕಾರ್ಯಕ್ರಮ, ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ಒದಗಿಸಿದರು

ಸಭೆಯಲ್ಲಿ ನಿಗಮದ ಅಭಿಯಂತರುಗಳಾದ ಪ್ರವೀಣ್, ಸಿದ್ದರಾಜು, ಅನಂತ ಭಟ್, ದೇವಾಲಯ ಸಮಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ , ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ದೇವಾಲಯ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ಗ್ರಾಮ ಪಂಚಾಯಿತಿ ಸದಸ್ಯರಾದ ದಂಡಿನ ಜಯಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರಾಜೀವ್ ಪ್ರಮುಖರಾದ ರವಿ ಹೆಬ್ಬಾರ್, ಕುಯ್ಯಮುಡಿ ಸುನಿಲ್, ಭಾಸ್ಕರ್ ಹೊಸಗದ್ದೆ, ವಿಠಲ ಆಚಾರ್, ಕಾವೇರಿ ಮಹಾ ಆರತಿ ಬಳಗದ ಅಧ್ಯಕ್ಷೆ ವನಿತ ಚಂದ್ರಮೋಹನ್ ಮತ್ತಿತರರಿದ್ದರು.

ಸಭೆಗೂ ಮುನ್ನ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಂಕಲ್ಪ ಮಾಡಿದರು.