ಕೂಡಿಗೆ, ಡಿ. ೧೨: ಇಲ್ಲಿಗೆ ಸಮೀಪದ ಶಿರಂಗಾಲದ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ, ಶ್ರೀಕಾಳಿಕಾಂಬ ಸಾವಯವ ಕೃಷಿ ಸಂಘದ ವತಿಯಿಂದ ಸಾವಯವ ಕೃಷಿ ಅಳವಡಿಕೆ ಮತ್ತು ಸಾವಯವ ಪ್ರಮಾಣೀಕರಣ ಕುರಿತು ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಗ್ರಾಮದ ಮಹಿಳೆಯರು ಭತ್ತ, ರಾಗಿ, ಜೋಳದ ರಾಶಿಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ದೇವಯ್ಯ ಸಾವಯವ ಕೃಷಿ ಅಳವಡಿಕೆ ಗುಂಪು ಪ್ರಮಾಣೀಕರಣ, ಸಾವಯವದಲ್ಲಿ ಅಡಿಕೆ ಕೃಷಿ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದರು. ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಸಾವಯವ ಕೃಷಿಯಲ್ಲಿ ಭತ್ತ, ರಾಗಿ, ತರಕಾರಿ ಬೆಳೆಗಳ ನಿರ್ವಹಣೆ ಬಗ್ಗೆ ಮತ್ತು ಜೈವಿಕ ತಂತ್ರಜ್ಞಾನದ ವಿಷಯದ ಬಗ್ಗೆ ತಿಳಿಸಿದರು.
ನಂತರ ಪ್ರಗತಿಪರ ಸಾವಯವ ಕೃಷಿಕರಾದ ಎಚ್.ಎಸ್. ರಾಜಶೇಖರ್ ಸಾವಯವ ಕೃಷಿ ಮತ್ತು ನಾಟಿ ಔಷಧಿಗಳ ಉಪಯೋಗದ ಬಗ್ಗೆ ತಿಳಿಸಿದರು. ಕುಶಾಲನಗರ ಕೃಷಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಯಾದ ಡಾ.ಕೆ. ಅರುಣ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ನಿಯಮಾನುಸಾರ ವಾಗಿ ಹಂತ, ಹಂತವಾಗಿ ರೈತರ ಸರಕಾರದ ವಿವಿಧ ಯೋಜನೆಯ ಮಾಹಿತಿಯನ್ನು ಪಡೆದು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಶಿರಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹಾಲಕ್ಷಿö್ಮ ಆರೋಗ್ಯ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮತ್ತು ಕೋವಿಡ್ ೧೯ ಲಸಿಕೆಯನ್ನು ಎಲ್ಲರೂ ಪಡೆಯುವಂತೆ ಇಲಾಖೆಯ ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾಳಿಕಾಂಬ ಸಾವಯವ ಕೃಷಿ ಸಂಘದ ಅಧ್ಯಕ್ಷ ವೀರಭದ್ರಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರಂಗಾಲ ಗ್ರಾ.ಪಂ. ಸದಸ್ಯರಾದ ಎಸ್.ಬಿ. ಶ್ರೀಕಾಂತ್, ಡಿ.ಎಸ್. ಸರಿತಾ, ಬಸವರಾಜ್, ಸಾವಯವ ಕೃಷಿ ಅಂತರಿಕ ನಿರೀಕ್ಷಣಾ ವ್ಯವಸ್ಥಾಪಕ ಕೆ. ಪುಟ್ಟಸ್ವಾಮಿ, ಸಂಸ್ಥೆ ಮ್ಯಾನೇಜರ್ ಲೋಕೇಶ್ ಭಾಗವಹಿಸಿದ್ದರು.
ಸಾವಯವ ಕೃಷಿ ಅಂತರಿಕ ನಿರೀಕ್ಷಣೆ ವ್ಯವಸ್ಥಾಪಕ ಕೆ. ಪುಟ್ಟಸ್ವಾಮಿ ಸ್ವಾಗತಿಸಿ, ನಿರೂಪಿಸಿದರು. ಐ.ಸಿ.ಎಸ್ ಮ್ಯಾನೇಜರ್ ಲೋಕೇಶ್ ವಂದಿಸಿದರು.