ಮಡಿಕೇರಿ, ಡಿ. ೧೨: ರಾಜ್ಯಾದ್ಯಂತ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಬೃಹತ್ ಅಭಿಯಾನ ನಡೆಯುತ್ತಿದ್ದು, ಕೊಡಗಿನಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಕೆಪಿಸಿಸಿ ವೀಕ್ಷಕ ಟಿ.ಎಂ ಶಾಹಿದ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಿಂದ ಸದೃಢಗೊಳಿಸಲು ಸದಸ್ಯತ್ವ ಅಭಿಯಾನ ಆರಂಭಿಸಿದ್ದು, ರಾಜ್ಯಾದ್ಯಂತ ಏಕಕಾಲದಲ್ಲಿ ಅಭಿಯಾನ ನಡೆಯುತ್ತಿದೆ. ಜಿಲ್ಲೆಯ ೩೩ ಕಡೆಗಳಲ್ಲಿ ಸಾಂಕೇತಿಕವಾಗಿ ಸದಸ್ಯತ್ವ ನೋಂದಣಿ ಕಾರ್ಯ ನಡೆದಿದೆ. ಕಾಂಗ್ರೆಸ್‌ನ ತತ್ವ ಸಿದ್ದಾಂತದ ಮೇಲೆ ನಂಬಿಕೆ ಇರುವವರು, ಬಿಜೆಪಿ ಅಸಮರ್ಪಕ ಆಡಳಿತದಿಂದ ಬೇಸತ್ತವರು ಕಾಂಗ್ರೆಸ್ ಸದಸ್ಯತ್ವ ಪಡೆಯಬಹುದು ಎಂದರು.
ಕೆಪಿಸಿಸಿ ವಕ್ತಾರ ಲಕ್ಷö್ಮಣ್ ಮಾತನಾಡಿ, ೧೨ ವರ್ಷಗಳ ಬಳಿಕ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ೨೫ ಸಾವಿರ ಸದಸ್ಯತ್ವ ನೋಂದಣಿ ಮಾಡುವ ಉದ್ದೇಶವಿದ್ದು, ೨೦೨೨ರ ವೇಳೆಗೆ ರಾಜ್ಯದಲ್ಲಿ ೫೦ ಲಕ್ಷ ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದರು. ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ ಎಂದು ದೂರಿದರು. ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕರು, ಸಂಸದರು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕಾವೇರಪ್ಪ, ಮೈಸೂರು ವಲಯ ಸಾಮಾಜಿಕ ಜಾಲತಾಣ ಉಸ್ತುವಾರಿ ಚಿಣ್ಣಪ್ಪ, ಸಾಮಾಜಿಕ ಜಾಲತಾಣ ಸಂಚಾಲಕ ಸೂರಜ್ ಹೊಸೂರು, ಪಕ್ಷದ ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ ಉಪಸ್ಥಿತರಿದ್ದರು.