ಸೋಮವಾರಪೇಟೆ,ಡಿ.೧೧: ರೈತರು ಹಾಗೂ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಮುಕ್ತಿ ನೀಡಬೇಕೆಂದು ಆಗ್ರಹಿಸಿ ತಾ. ೧೩ರಿಂದ (ನಾಳೆಯಿಂದ) ಪಟ್ಟಣದ ಜೇಸೀ ವೇದಿಕೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಜಿಲ್ಲೆಯ ರೈತರು ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಿ, ಸೂಕ್ತ ನಿರ್ಣಯಗಳನ್ನು ಕೈಗೊಳ್ಳಬೇಕು. ಈಗಾಗಲೇ ನಮ್ಮ ಬೇಡಿಕೆಯನ್ನು ಶಾಸಕರುಗಳಿಗೆ ಸಲ್ಲಿಸಿದ್ದು, ಅಧಿವೇಶನದಲ್ಲಿ ಮಾತನಾಡಿ ಬೇಡಿಕೆ ಈಡೇರಿಸಬೇಕು. ಅಲ್ಲಿಯವರೆಗೂ ಬೆಳಿಗ್ಗೆ ೭ ರಿಂದ ಸಂಜೆ ೭ ಗಂಟೆಯವರೆಗೆ ಪ್ರತಿದಿನ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದರು.

ಕಾಫಿ ಬೆಳೆಗಾರರಿಗೆ ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಬೇಕು. ಬೆಳೆಗಳಿಗೆ ಒಂದೂವರೆ ಪಟ್ಟು ಬೆಂಬಲ ಬೆಲೆ ನಿಗದಿ ಪಡಿಸಬೇಕೆಂಬ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಬೇಕು. ಕಾಫಿಗೂ ಬೆಂಬಲ ಬೆಲೆ ಘೋಷಿಸಬೇಕು. ಅತಿವೃಷ್ಟಿಗೆ ಸಿಲುಕಿದ ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ವನ್ಯಪ್ರಾಣಿ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ದಿನೇಶ್ ತಿಳಿಸಿದರು.

ಅಧಿವೇಶನದಲ್ಲಿ ನಮ್ಮ ಬೇಡಿಕೆಗಳನ್ನು ಪ್ರಸ್ತಾಪಿಸಿ ಪರಿಹಾರ ಒದಗಿಸಿಕೊಡಲು ಶಾಸಕರುಗಳು ಮುಂದಾಗಬೇಕು. ಅಲ್ಲಿಯವರೆಗೂ ಜೇಸೀ ವೇದಿಕೆಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ತಾಲೂಕಿನ ಎಲ್ಲಾ ಬೆಳೆಗಾರರು ಹಾಗೂ ರೈತರು ಧರಣಿಗೆ ಬೆಂಬಲ ನೀಡಲಿದ್ದಾರೆ ಎಂದು ದಿನೇಶ್ ತಿಳಿಸಿದರು.

ಗೋಷ್ಠಿಯಲ್ಲಿ ರೈತ ಸಂಘದ ಸಂಚಾಲಕರಾದ ಗರಗಂದೂರು ಲಕ್ಷö್ಮಣ್, ಎಸ್.ಬಿ. ರಾಜಪ್ಪ, ಉಪಾಧ್ಯಕ್ಷ ಎ.ಆರ್. ಕುಶಾಲಪ್ಪ, ಬಿ.ಪಿ. ಪ್ರದೀಪ್, ಕಿಶನ್ ಅವರುಗಳು ಉಪಸ್ಥಿತರಿದ್ದರು.