ವೀರಾಜಪೇಟೆ, ಡಿ. ೧೧: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ವಾಹನ ಡಿಕ್ಕಿಯಾದ ಪರಿಣಾಮ ವೃದ್ಧೆ ಸಾವನ್ನಪ್ಪಿರುವ ಘಟನೆ ಅಮ್ಮತ್ತಿ ಸಮೀಪದ ಮುಕ್ಕಟ್ಟಿಕೊಪ್ಪದ ಬಳಿ ನಡೆದಿದೆ.

ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕಟಿಕೊಪ್ಪ ಗ್ರಾಮದ ನಿವಾಸಿ ರಾಣಿ ಮಂದಣ್ಣ (೮೫) ಅಪಘಾತದಿಂದ ಮೃತಪಟ್ಟ ದುರ್ಧೈವಿ. ತಾ. ೧೦ ರ ಸಂಜೆ ಸುಮಾರು ೫.೩೦ರ ಸಮಯದಲ್ಲಿ ಮುಕ್ಕಟಿಕೊಪ್ಪ ಸ್ವಗೃಹದಿಂದ ತೆರಳಿ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ಸಂದರ್ಭ ಜಾನ್ ಎಂಬವರ ಗೂಡ್ಸ್ ವಾಹನದ ರಿವರ್ಸ್ ತೆಗೆಯುವ ಸಂದರ್ಭ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಡಿಕ್ಕಿಯಾಗಿದೆ. ಪರಿಣಾಮ ಕಾಲು ಮತ್ತು ಕೈ ಭಾಗಗಳಿಗೆ ಗಾಯಗಳಾಗಿವೆ, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರ ನೆರವಿನಿಂದ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷೆ ನಡೆಸಿ ಮೃತಪಟ್ಟಿರುವುದು ದೃಢಪಡಿಸಿದ್ದಾರೆ. - ಕಿಶೋರ್ ಶೆಟ್ಟಿ