ಮಡಿಕೇರಿ, ಡಿ. ೧೧: ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ದೇಶದ ನೌಕಾದಳದ ಮೂಲಕ ನೀಡಲಾಗಿರುವ ಯುದ್ಧ ನೌಕೆಯ ಮಾದರಿ ಸೇರಿದಂತೆ ಇನ್ನಿತರ ವಸ್ತುಗಳ ಉದ್ಘಾಟನೆಗಾಗಿ ವೈಸ್ ಅಡ್ಮಿರಲ್ ಬಿಸ್ವಜಿತ್ದಾಸ್ ಗುಪ್ತ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳು ನಡೆದಿವೆ. ತಾ. ೧೨ರಂದು (ಇಂದು) ಇವರು ಜಿಲ್ಲೆಗೆ ಆಗಮಿಸಲಿದ್ದು, ತಾ. ೧೩ರಂದು (ನಾಳೆ) ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿದೆ. ವೈಸ್ ಅಡ್ಮಿರಲ್ ಅವರೊಂದಿಗೆ ನೌಕಾದಳ ದಿಂದ ಈ ಪರಿಕರಗಳು ತಿಮ್ಮಯ್ಯ ಮ್ಯೂಸಿಯಂಗೆ ಬರಲು ಕಾರಣೀ ಭೂತರಾಗಿರುವ ಜಿಲ್ಲೆಯವರೇ ಆದ ರಿಯರ್ ಅಡ್ಮಿರಲ್ ಐಚೆಟ್ಟಿರ ಬಿ. ಉತ್ತಯ್ಯ ಅವರು ಆಗಮಿಸುತ್ತಿದ್ದಾರೆ.
ಯುದ್ಧನೌಕೆಯಾದ ಶಿವಾಲಿಕ್, ಐ.ಎನ್.ಎಸ್. ಕುಕ್ರಿ, ಪಂಡೋಬಿ, ಎ.ಕೆ.೨೩೦ ಗನ್ನಂತಹ ಆಕರ್ಷಣೆಗಳು ಇಲ್ಲಿ ಅನುಷ್ಠಾನಗೊಳ್ಳುತ್ತಿವೆ. ಈಗಾಗಲೇ ಇವುಗಳ ಅಳವಡಿಕೆಯೂ ಪೂರ್ಣಗೊಂಡಿದೆ. ಇಂದು ಎಸ್.ಸಿ.ಸಿ. ವಿದ್ಯಾರ್ಥಿಗಳು ಇಲ್ಲಿ ತಾಲೀಮು ನಡೆಸಿದ್ದು, ನಗರದಲ್ಲಿ ಹೆಲಿಕಾಪ್ಟರ್ ಹಾರಾಟದ ಸಮೀಕ್ಷೆಯೂ ನಡೆಯಿತು. ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಪ್ರಯತ್ನದ ಫಲವಾಗಿ ಈ ಪರಿಕರಗಳು ಜಿಲ್ಲೆಗೆ ಬಂದಿದ್ದು, ಜಿಲ್ಲಾಡಳಿತದ ಸಹಕಾರದೊಂದಿಗೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. -ಚಿತ್ರಗಳು : ಲಕ್ಷಿö್ಮÃಶ್