ಕೊಡ್ಲಿಪೇಟೆ, ಡಿ. ೧೧: ಸಮೀಪದ ಬೆಂಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸುಮಿತ್ರಾಳಿಗೆ ಕೊಡ್ಲಿಪೇಟೆ ಹೋಬಳಿ ಕರವೇ ವತಿಯಿಂದ ಬ್ಯಾಗ್, ಪುಸ್ತಕಗಳು ಸೇರಿದಂತೆ ಇನ್ನಿತರ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಈಕೆಯ ೧೦ನೇ ತರಗತಿವರೆಗಿನ ವಿದ್ಯಾಭ್ಯಾಸದ ಹೊಣೆಯನ್ನು ಕೊಡ್ಲಿಪೇಟೆ ಹೋಬಳಿ ಕರವೇ ವಹಿಸಿಕೊಂಡಿದ್ದು, ಪ್ರತಿ ವರ್ಷ ಶೈಕ್ಷಣಿಕ ನೆರವು ನೀಡಲಾಗುತ್ತಿದೆ ಎಂದು ಅಧ್ಯಕ್ಷ ಡಿ.ಪಿ. ಭೂಪಾಲ್ ತಿಳಿಸಿದರು. ಕರವೇ ಪದಾಧಿಕಾರಿಗಳಾದ ಶೋಭಾ ಮಂಜುನಾಥ್ ಅವರು ವಿದ್ಯಾರ್ಥಿನಿಗೆ ಬ್ಯಾಗ್, ಪುಸ್ತಕಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ ಸಂಘಟನೆಯ ಮಂಜುನಾಥ್, ಯೋಗಾನಂದ, ಮುನ್ನಾಪ್, ಶಾಲಾ ಮುಖ್ಯೋಪಾಧ್ಯಾಯ ಮೂರ್ತಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.