ಚೆಟ್ಟಳ್ಳಿ, ಡಿ. ೧೦: ಕಳೆದ ಐದಾರು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಕಣದಲ್ಲಿ ಬಡಿದು ಹಾಕಿದ್ದ ಭತ್ತದ ರಾಶಿ ತೇವಗೊಂಡ ಪರಿಣಾಮ ಮೊಳಕೆಯೊಡೆದು ಹಾನಿಯಾಗಿದೆ. ಕೂಡ್ಲೂರು-ಚೆಟ್ಟಳ್ಳಿಯ ರೈತ ಕರ್ಣಯ್ಯನ ಪೂವಯ್ಯ ಹಲವು ವರ್ಷಗಳಿಂದ ಭತ್ತ ಬೆಳೆಯುತ್ತಿದ್ದು, ಕಾಡಾನೆಗಳು ಗದ್ದೆಗಳಿಗೆ ನಷ್ಟಪಡಿಸದಂತೆ ಭತ್ತ ಕುಯಿಲಿನವರೆಗೆ ಅಟ್ಟಣಿ ಕಟ್ಟಿ ಕಾಡಾನೆಗಳನ್ನು ಕಾವಲು ಕಾಯುತ್ತಿದ್ದರು. ಈ ವರ್ಷ ಅರಣ್ಯದಂಚಿನಲ್ಲಿ ಸೋಲಾರ್ ಬೇಲಿ ಅಳವಡಿಸಿದರಿಂದ ಕಾಡಾನೆ ಗಳು ಗದ್ದೆಗೆ ಬರಲಿಲ್ಲ. ಕಾಡಾನೆಗಳ ನಷ್ಟದಿಂದ ಸುತ್ತಲಿನ ರೈತರು ನಿಟ್ಟುಸಿರು ಬಿಡುವಂತಾಗಿತ್ತು.

ಆದರೆ ಬೆಂಬಿಡದೆ ಬರತೊಡಗಿದ ಅಕಾಲಿಕ ಮಳೆಯ ಪರಿಣಾಮ ತೆನೆಗೊಂಡ ಭತ್ತದ ಪೈರೆಲ್ಲ ಬಿದ್ದು ನೆಲಕಚ್ಚತೊಡಗಿತು. ಪೂವಯ್ಯ ಭತ್ತದ ಪೈರನೆಲ್ಲ ಕುಯಿಲು ಮಾಡಿ ಕಣದಲ್ಲಿ ಬಡಿದು ಭತ್ತವನ್ನು ಬೇರ್ಪಡಿಸಿದ ದಿನ ಜೋರಾಗಿ ಮಳೆಬಂದ ಪರಿಣಾಮ ಭತ್ತದ ರಾಶಿಗೆ ಟಾರ್ಪಲ್ ಮುಚ್ಚಿದರೂ ಕೆಳಗಿನಿಂದ ನೀರು ಹರಿದು ಭತ್ತವೆಲ್ಲ ತೇವಗೊಂಡಿತು. ಒಂದೆರಡು ದಿನಗಳ ನಂತರ ತೆಗೆದಾಗ ತೇವಗೊಂಡ ಭತ್ತ ಮೊಳಕೆಯೊಡೆಯತೊಡಗಿತು. ಬಡಿಯಲು ಬಾಕಿ ಇದ್ದ ಭತ್ತದ ಪೈರಿನಲ್ಲೂ ಮೊಳಕೆಯೊಡೆದಿವೆ. ಮೊಳಕೆಯೊಡೆದ ಭತ್ತವನ್ನು ಬಿಸಿಲಿಗೆ ಒಣ ಹಾಕಿದ್ದು, ಪೂರ್ಣ ಮೊಳಕೆಯೊಡೆದದ್ದು ಪ್ರಯೋಜನಕ್ಕೆ ಬಾರದು. ಕೈಗೆ ಬಂದದ್ದು ಬಾಯಿಗೆ ಸಿಗುತ್ತಿಲ್ಲ ಎಂಬAತಾಗಿದೆ. ಸುತ್ತಲಿನ ಕೆಲವು ರೈತರ ಕಥೆಯು ಇದೆಯಾಗಿದೆ. ಮುಂದಿನ ವರ್ಷದಿಂದ ಭತ್ತದ ಬೆಳೆಯನ್ನೆ ಬೆಳೆಯುವುದಿಲ್ಲ ಎಂದು ನಿರ್ಧರಿಸಿರುವ ಬಗ್ಗೆ ಪೂವಯ್ಯ ನೋವಿನಿಂದ ಹೇಳುತ್ತಾರೆ. - ಪುತ್ತರಿರ ಕರುಣ್ ಕಾಳಯ್ಯ