ಸುಂಟಿಕೊಪ್ಪ: ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಶ್ರೀ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಷಷ್ಠಿಯ ಅಂಗವಾಗಿ ದೇವಾಲಯವನ್ನು ತಳಿರು ತೋರಣ ವಿವಿಧ ಹೂಗಳಿಂದ ಅಲಂಕಾರಿಸಲಾಗಿತ್ತು.
ಗಣಪತಿ ಹೋಮ, ಸತ್ಯನಾರಾಯಣ ಪೂಜೆ ಶ್ರೀ ಸುಬ್ರಹ್ಮಣ್ಯ ನಾಗ ದೇವತಾ ಗುಡಿಯಲ್ಲಿ ವಿಶೇಷ ಕೈಂಕರ್ಯವನ್ನು ನೆರವೇರಿಸಲಾಯಿತು.ಅರ್ಚಕ ಭಾನುಪ್ರಕಾಶ್ ಭಟ್, ರಮೇಶ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಭಕ್ತಾದಿಗಳು ದೇವರ ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭ ದೇವಾಲಯದ ಟ್ರಸ್ಟಿ ಹಾಗೂ ಅಧ್ಯಕ್ಷ ಕೆ.ಎನ್. ಪೂಣಚ್ಚ, ಕಾರ್ಯದರ್ಶಿ ಬಿ.ಸಿ. ದಿನೇಶ್, ಖಜಾಂಚಿ ಡಾ. ಎ.ಬಿ. ತಮ್ಮಯ್ಯ, ತಕ್ಕ ಮುಖ್ಯಸ್ಥರಾದ ಕುಮಾರ್, ಪ್ರಧಾನ ಟ್ರಸ್ಟಿ ಕೆ.ಎಸ್. ಮಂಜುನಾಥ್, ಜಗನ್ನಾಥ್ ರೈ, ದತ್ತ ಸೋಮಣ್ಣ, ಎಂ.ಎಸ್. ಸುರೇಶ್ ಚಂಗಪ್ಪ, ಸನ್ನಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಕಣಿವೆ: ಕಾರ್ತಿಕ ಮಾಸ ಮುಗಿದೊಡನೆಯೇ ಬರುವ ಸುಬ್ರಹ್ಮಣ್ಯ ಷಷ್ಠಿ ಪೂಜೋತ್ಸವ ಕುಶಾಲನಗರ ತಾಲೂಕಿನಾದ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕೂಡಿಗೆಯ ಉದ್ಭವ ಸುಬ್ರಮಣ್ಯ ಸ್ವಾಮಿ ದೇಗುಲದ ಆವರಣದಲ್ಲಿ ಸರಳವಾಗಿ ರಥೋತ್ಸವ ನಡೆಯಿತು. ಕಣಿವೆಯ ರಾಮಲಿಂಗೇಶ್ವರ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ವಿಶೇಷವಾಗಿ ನಾಗಪೂಜೆ ನೆರವೇರಿತು. ಹಾಗೆಯೇ ಹುದುಗೂರಿನ ಉಮಾಮಹೇಶ್ವರ ದೇವಾಲಯದಲ್ಲಿ, ನಂಜರಾಯಪಟ್ಟಣದ ನಂಜುAಡೇಶ್ವರ ದೇವಾಲಯದಲ್ಲಿ, ಗುಡ್ಡೆಹೊಸೂರು ಹಾಗೂ ರಂಗಸಮುದ್ರದ ಬಸವೇಶ್ವರ ದೇವಾಲಯದಲ್ಲಿ, ಕುಶಾಲನಗರದ ಹೌಸಿಂಗ್ ಬೋರ್ಡ್ನಲ್ಲಿರುವ ಉದ್ಭವ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಾಗೂ ಕಾವೇರಿ ನದಿ ದಂಡೆಯಲ್ಲಿರುವ ನಾಗದೇವತಾ ಸನ್ನಿಧಿ ಸೇರಿದಂತೆ ಇನ್ನೂ ಹಲವೆಡೆಗಳಲ್ಲಿ ಷಷ್ಠಿ ಹಬ್ಬ ಹಾಗೂ ಪೂಜೋತ್ಸವ ನಡೆಯಿತು.
ಷಷ್ಠಿ ಅಂಗವಾಗಿ ಗುರುವಾರ ಬೆಳಿಗ್ಗೆ ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳ ಮಹಿಳೆಯರು ಶುಭ್ರವಾದ ಉಡುಗೆ ತೊಟ್ಟು ಮನೆಗಳ ಮುಂದೆ ಗೋಮೂತ್ರದಿಂದ ಅಂಗಳವನ್ನು ಶುದ್ಧೀಕರಿಸಿ ರಂಗೋಲಿ ಹಚ್ಚಿ ಮನೆಯೊಳಗೆ ವಿಶೇಷವಾದ ಪೂಜೆ ಸಲ್ಲಿಸಿದರು.
ಹಾಗೆಯೇ ಹಬ್ಬದ ಅಂಗವಾಗಿ ಪ್ರತಿ ಮನೆ ಮನೆಗಳ ಮಹಿಳೆಯರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಉಪವಾಸ ವ್ರತ ಆಚರಿಸಿ ತರಕಾರಿ ಕಾಯಿ ಪಲ್ಯೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಮನೆಗಳಲ್ಲಿ ಷಷ್ಠಿಯ ವಿಶೇಷವಾದ ಕಿಚಿಡಿ ಅನ್ನ ಹಾಗೂ ತರಕಾರಿ ಸಾಂಬಾರ್ ಸಿದ್ಧಪಡಿಸಿ ದೇವರಿಗೆ ಎಡೆಯಿಟ್ಟು ಕುಟುಂಬ ಸಮೇತ ಒಟ್ಟಾಗಿ ಸವಿದರು.
ಷಷ್ಠಿ ಅಂಗವಾಗಿ ಬೆಳಗ್ಗೆಯಿಂದ ಸಂಜೆವರೆಗೂ ಮಹಿಳೆಯರು ಹಾಗೂ ಮಕ್ಕಳು ತಂಡೋಪತAಡವಾಗಿ ಸಮೀಪದ ದೇವಾಲಯಿಗೆ ತೆರಳಿ ನಾಗದೇವರನ್ನು ನಮಿಸಿ ಪ್ರಸಾದ ಸ್ವೀಕರಿಸಿದರು. ಹಬ್ಬದ ಅಂಗವಾಗಿ ಕುಶಾಲನಗರದ ನಾಗದೇವತಾ ಸನ್ನಿಧಿ ಹಾಗೂ ಸುಬ್ರಹ್ಮಣ್ಯ ದೇವಾಲಯಗಳ ಸನ್ನಿಧಿಯಲ್ಲಿ ಅನ್ನಸಂತರ್ಪಣೆ ನೆರವೇರಿತು.ಮುಳ್ಳೂರು: ಗುರುವಾರ ಸಮೀಪದ ಶನಿವಾರಸಂತೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಷಷ್ಠಿ ಹಬ್ಬವನ್ನು ಆಚರಿಸಿದರು. ಶನಿವಾರಸಂತೆ ಪಟ್ಟಣ ಸೇರಿದಂತೆ ವ್ಯಾಪ್ತಿಯ ಆಲೂರುಸಿದ್ದಾಪುರ, ಮಾಲಂಬಿ, ಮುಳ್ಳೂರು, ನಿಡ್ತ, ಗೋಪಾಲಪುರ, ಹಂಡ್ಲಿ, ದುಂಡಳ್ಳಿ ಮುಂತಾದ ಕಡೆಗಳಲ್ಲಿ ಷಷ್ಠಿ ಹಬ್ಬ ಆಚರಿಸಿದರು. ಹಬ್ಬ ಆಚರಿಸಿದ ಮನೆಗಳಲ್ಲಿ ಬೆಳಗ್ಗೆಯಿಂದ ಉಪವಾಸ ವೃತ ಮಾಡಿದ ನಂತರ ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ ಪಾಯಸ, ಅನ್ನ ವಿವಿಧ ತರಕಾರಿಗಳ ಮಿಶ್ರಣ ಪಲ್ಯ ಅಡುಗೆ ತಯಾರಿಸಿ ಭೋಜನ ಮಾಡಿದರು.
ಗುರುವಾರ ಬೆಳಗ್ಗೆ ಹಬ್ಬದ ಪ್ರಯುಕ್ತ ಅಕ್ಕಪಕ್ಕದ ಮನೆಗಳಿಗೆ ಪರಸ್ಪರ ತರಕಾರಿ ಕಾಯಿಪಲ್ಲೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಷಷ್ಠಿ ಹಬ್ಬದ ಸಾಂಪ್ರದಾಯಕ ಕ್ರಮವನ್ನು ಆಚರಣೆ ಮಾಡಿದರು. ಹಬ್ಬದ ಪ್ರಯುಕ್ತ ಶನಿವಾರಸಂತೆ ವ್ಯಾಪ್ತಿಯ ಭಕ್ತರು ಜಿಲ್ಲೆಯ ಕೂಡಿಗೆ ಮತ್ತು ಕೆಲವು ಭಕ್ತರು ಪಕ್ಕದ ಹಾಸನ ಜಿಲ್ಲೆಗೆ ಸೇರಿದ ರಾಮನಾಥಪುರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಗಳಿಗೆ ತೆರಳಿ ಹರಕೆ ಸಲ್ಲಿಸಿ ಸಾಂಪ್ರದಾಯಕ ರಥೋತ್ಸವ ಕಾರ್ಯಕ್ರಮ ಪಾಲ್ಗೊಂಡರು.ಕುಶಾಲನಗರ: ಇಲ್ಲಿನ ಹೌಸಿಂಗ್ ಬೋರ್ಡ್ ಕಾಲೋನಿಯ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಜರಗಿದವು. ಅರ್ಚಕರಾದ ಕೃಷ್ಣಮೂರ್ತಿ ಮತ್ತು ತಂಡದ ಸದಸ್ಯರಿಂದ ಬೆಳಿಗ್ಗೆ ೫ ಗಂಟೆಯಿAದ ದೇವರಿಗೆ ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಗಳು ಜರುಗಿದವು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವಾಲಯದ ಆವರಣದಲ್ಲಿರುವ ಗುಡಿಯಲ್ಲಿ ಹಾಲು ಅಭಿಷೇಕ ಮೂಲಕ ದೇವರಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗೆ ದೇವಾಲಯ ಸಮಿತಿ ವತಿಯಿಂದ ಅನ್ನದಾನ ಕಾರ್ಯಕ್ರಮ ನಡೆಯಿತು. ದೇವಾಲಯ ಸಮಿತಿಯ ಅಧ್ಯಕ್ಷ ಚಿಕ್ಕೇಗೌಡ ಮತ್ತು ಆಡಳಿತ ಮಂಡಳಿ ಸದಸ್ಯರು ಇದ್ದರು.ಹುದುಗೂರುವಿನಲ್ಲಿ ಷಷ್ಠಿ ಪೂಜೆ
ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯ ಆವರಣದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಸನ್ನಿಧಿಯಲ್ಲಿ ದೇವಾಲಯ ಸಮಿತಿಯ ವತಿಯಿಂದ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಹುದುಗೂರು, ಮದಲಾಪುರ, ಕಾಳಿದೇವನ ಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.