ಸೋಮವಾರಪೇಟೆ, ಡಿ. ೧೦: ಮುಂಗಾರು ಮಳೆಯೊಂದಿಗೆ ನಂತರದ ದಿನಗಳಲ್ಲಿ ಎದುರಾದ ಅತಿವೃಷ್ಟಿ, ಕಳೆದ ೨ ತಿಂಗಳಿನಿAದ ಸುರಿದ ಅಕಾಲಿಕ ಮಳೆಯಿಂದ ಕೊಡಗಿನಲ್ಲಿ ಭಾರೀ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು, ಈವರೆಗೆ ೫೩,೪೨೧ ಮಂದಿ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಸಕ್ತ ವರ್ಷ ಸುರಿದ ಅಕಾಲಿಕ ಮಳೆಯಿಂದ ಜಿಲ್ಲಾದ್ಯಂತ ಕಾಫಿ, ಕರಿಮೆಣಸು ಸೇರಿದಂತೆ ಕೃಷಿ ಫಸಲು ನಷ್ಟವಾಗಿದ್ದು, ಸರ್ಕಾರದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ತಾ. ೭ ರವರೆಗೆ ಕಾಲಾವಕಾಶ ನೀಡಲಾಗಿತ್ತು. ಅದರಂತೆ ರೈತರು ಅರ್ಜಿ ಸಲ್ಲಿಸಿದ್ದು, ಈಗಾಗಲೇ ಜಿಲ್ಲೆಯ ೧೨,೮೫೭ ಮಂದಿ ರೈತರಿಗೆ ೧೮.೩೦ ಕೋಟಿ ಪರಿಹಾರ ಹಣ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ.

ಜಿಲ್ಲೆಯ ೫ ತಾಲೂಕುಗಳ ಪೈಕಿ ಸೋಮವಾರಪೇಟೆ ತಾಲೂಕಿನಿಂದಲೇ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಅಕಾಲಿಕ ಮಳೆಯಿಂದ ಅರೇಬಿಕಾ ಕಾಫಿ ಸೇರಿದಂತೆ ಕರಿಮೆಣಸು, ಭತ್ತ, ಮುಸುಕಿನ ಜೋಳ, ಅಡಿಕೆ, ಶುಂಠಿ ಹಾಗೂ ತರಕಾರಿ ಬೆಳೆಗಳು ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿವೆ. ಪರಿಹಾರಕ್ಕಾಗಿ ರೈತರು ನಾಡ ಕಚೇರಿ ಹಾಗೂ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಸೋಮವಾರಪೇಟೆ ತಾಲೂಕಿನಿಂದ ೧೫,೦೪೯ ಅರ್ಜಿಗಳು ಸಲ್ಲಿಕೆಯಾಗಿವೆ.

ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ೧೧,೫೧೨ ಅರ್ಜಿಗಳು ಸಲ್ಲಿಕೆಯಾಗಿವೆ. ವೀರಾಜಪೇಟೆ ತಾಲೂಕಿನಲ್ಲಿ ೧೦,೭೪೫, ಪೊನ್ನಂಪೇಟೆಯಲ್ಲಿ ೧೦,೯೭೧, ಕುಶಾಲನಗರಲ್ಲಿ ೫,೧೪೪ ಅರ್ಜಿಗಳು ಪರಿಹಾರಕ್ಕಾಗಿ ಸಲ್ಲಿಕೆಯಾಗಿವೆ.

(ಮೊದಲ ಪುಟದಿಂದ) ಇವುಗಳ ಪೈಕಿ ಸೋಮವಾರಪೇಟೆ ತಾಲೂಕಿನಲ್ಲಿ ೧೨,೮೯೮ ಅರ್ಜಿಗಳು, ಮಡಿಕೇರಿಯಲ್ಲಿ ೭,೭೧೫, ವೀರಾಜಪೇಟೆಯಲ್ಲಿ ೯,೬೩೪, ಪೊನ್ನಂಪೇಟೆಯಲ್ಲಿ ೭,೯೨೬, ಕುಶಾಲನಗರದಲ್ಲಿ ೪,೪೬೭ ಅರ್ಜಿಗಳನ್ನು ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳು ಗಣಕಯಂತ್ರದಲ್ಲಿ ನಮೂದಿಸಿ ‘ಅಪ್ರೂವಲ್’ ಮಾಡಿದ್ದಾರೆ.

ತಾ. ೧೨ ರವರೆಗಿನ ಮಾಹಿತಿ ಪ್ರಕಾರ ೫೩,೪೨೧ ಅರ್ಜಿಗಳ ಪೈಕಿ ೪೨,೬೪೦ ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ೫,೦೮೨ ಅರ್ಜಿಗಳನ್ನು ಆಯಾ ತಾಲೂಕಿನ ತಹಶೀಲ್ದಾರ್‌ಗಳು ತಮ್ಮ ಲಾಗಿನ್ ಮೂಲಕ ಅಪ್ರೂವಲ್ ಮಾಡಿದ್ದಾರೆ. ೫,೬೯೯ ಅರ್ಜಿಗಳನ್ನು ಅಪ್ರೂವಲ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಿಲ್ಲೆಯಾದ್ಯಂತ ಕಾಫಿ, ಕಾಳುಮೆಣಸು, ಭತ್ತ, ಬಾಳೆ, ಶುಂಠಿ, ಅಡಿಕೆ, ಮುಸುಕಿನ ಜೋಳ, ಗೆಣಸು ಸೇರಿದಂತೆ ಇನ್ನಿತರ ಬೆಳೆಗಳು ನಷ್ಟವಾಗಿರುವ ಬಗ್ಗೆ ರೈತರು ಅರ್ಜಿ ಸಲ್ಲಿಸಿದ್ದಾರೆ.

ರೂ.೧೮.೩೦ ಕೋಟಿ ಪರಿಹಾರ ವಿತರಣೆ: ಪ್ರಸಕ್ತ ವರ್ಷ ಬೆಳೆಹಾನಿ ಅನುಭವಿಸಿದ ಜಿಲ್ಲೆಯ ೧೨,೮೫೭ ಮಂದಿ ರೈತರಿಗೆ ಈವರೆಗೆ ೧೮.೩೦ ಕೋಟಿ ಅನುದಾನ ವಿತರಿಸಲಾಗಿದೆ. ರೈತರು ನೀಡಿರುವ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ. ನಿನ್ನೆಯವರೆಗೆ ೪,೨೮೯ ಮಂದಿ ರೈತರಿಗೆ ೬.೧೧ ಕೋಟಿ ಪರಿಹಾರ ನೀಡಿದ್ದು, ಇಂದು ೮,೫೬೮ ಮಂದಿ ರೈತರಿಗೆ ೧೨.೧೯ ಕೋಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತಂತ್ರಾAಶದಲ್ಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡAತೆ ರೈತರ ಖಾತೆಗೆ ಪರಿಹಾರ ಸಂದಾಯವಾಗಲಿದೆ. ಸ್ವೀಕಾರಗೊಂಡಿರುವ ಎಲ್ಲಾ ಅರ್ಜಿಗಳನ್ನು ತಾ.೨೧ರ ಒಳಗೆ ವಿಲೇವಾರಿ ಮಾಡಲು ಕಂದಾಯ ಇಲಾಖೆ ಕ್ರಮಕೈಗೊಂಡಿದೆ. - ವಿಜಯ್ ಹಾನಗಲ್