ಸೋಮವಾರಪೇಟೆ, ಡಿ. ೧೦: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ತಾ. ೧೨ರಂದು(ನಾಳೆ) ಚುನಾವಣೆ ನಡೆಯಲಿದ್ದು, ಜಿಲ್ಲೆಯ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು ೩೧ ಮತಗಟ್ಟೆ ಗಳನ್ನು ತೆರೆಯಲಾಗಿದೆ ಎಂದು ಚುನಾವಣಾಧಿಕಾರಿ ಸಲೀಂ ಮಾಹಿತಿ ನೀಡಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ ೧೪,೫೨೭, ಮಡಿಕೇರಿ ತಾಲೂಕಿನಲ್ಲಿ ೬೭೮, ವೀರಾಜಪೇಟೆ ತಾಲೂಕಿನಲ್ಲಿ ೩೦೫ ಮಂದಿ ಮತದಾರರು ಸೇರಿದಂತೆ ಒಟ್ಟು ೧೫೫೧೦ ಮಂದಿ ಮತದಾನದ ಅರ್ಹತೆ ಹೊಂದಿದ್ದಾರೆ. ಅವಿಭಜಿತ ಸೋಮವಾರಪೇಟೆ ತಾಲೂಕಿನ ಮತದಾರರಿಗೆ ಪಟ್ಟಣದ ಚನ್ನಬಸಪ್ಪ ಸಭಾಂಗಣ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಹಾಗೂ ಜೂನಿಯರ್ ಕಾಲೇಜು ಕಟ್ಟಡದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನ ಮತದಾರರಿಗೆ ಮಡಿಕೇರಿ ಕೆಇಬಿ ಕಚೇರಿ ಹಿಂಭಾಗವಿರುವ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಕಟ್ಟಡದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ತಾ. ೧೨ರಂದು ಬೆಳಿಗ್ಗೆ ೭ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ಸೋಮವಾರಪೇಟೆಯ ಚೆನ್ನಬಸಪ್ಪ ಸಭಾಂಗಣದಲ್ಲಿ ತೆರೆಯಲಾಗಿರುವ ೪ ಮತಗಟ್ಟೆಗಳಲ್ಲಿ-ತಾಲೂಕು ಮತದಾರರ ಪಟ್ಟಿಯ ಸಂಖ್ಯೆ ೧ ರಿಂದ ೨೦೦೦, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ೯ ಮತಗಟ್ಟೆಗಳಲ್ಲಿ ೨೦೦೧ ರಿಂದ ೬೫೦೦, ಸರ್ಕಾರಿ ಜೂನಿಯರ್ ಕಾಲೇಜಿನ ೧೩ ಮತಗಟ್ಟೆಗಳಲ್ಲಿ ೬೫೦೧ ರಿಂದ ೧೩ ಸಾವಿರ, ಪ್ರೌಢಶಾಲಾ ಕಟ್ಟಡದಲ್ಲಿ ೧೩೦೦೧ ರಿಂದ ೧೪,೫೨೭ರವರೆಗಿನ ಕ್ರಮ ಸಂಖ್ಯೆ ಹೊಂದಿರುವ ಮತದಾರರಿಗೆ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕಿನ ಮತದಾರರಿಗೆ ಜಿಲ್ಲಾ ಸಹಕಾರ ಯೂನಿಯನ್ ಕಟ್ಟಡದಲ್ಲಿರುವ ೨ ಮತಗಟ್ಟೆಗಳಲ್ಲಿ ಪ್ರತ್ಯೇಕವಾಗಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ತಾ. ೧೫ರಂದು ಬೆಳಿಗ್ಗೆ ೮ ರಿಂದ ಮಡಿಕೇರಿಯ ಐಟಿಐ ಜಂಕ್ಷನ್ ಬಳಿಯಿರುವ ಪೋಲೀಸ್ ಮೈತ್ರಿ ಸಭಾಂಗಣದಲ್ಲಿ ಮತ ಎಣಿಕೆಗೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಲೀಂ ಅವರು ತಿಳಿಸಿದ್ದಾರೆ.
ಚುನಾವಣೆಗೆ ಒಟ್ಟು ೧೭೪ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲೂ ಅಗತ್ಯ ಪೋಲೀಸ್ ಬಂದೋಬಸ್ತಿನ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದರೊಂದಿಗೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಹೊರಡಿಸಿರುವ ನಿಯಮದಂತೆ ಪ್ರತಿ ಮತಗಟ್ಟೆಗಳನ್ನು ಸ್ಯಾನಿಟೈಜರ್ ಮಾಡಿಸಲಾಗಿದೆ. ಮತದಾನ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಹಾಗೂ ಮತದಾರರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಪ್ರತಿ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್ ಇಡಲಾಗುವುದು. ಮತದಾರರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮತದಾನದಲ್ಲಿ ಭಾಗವಹಿಸಬೇಕೆಂದು ಸಲೀಂ ಮಾಹಿತಿ ನೀಡಿದ್ದಾರೆ.