ಕೂಡಿಗೆ, ಡಿ. ೮: ಸಮಾಜದಲ್ಲಿ ಹೆಚ್.ಐ.ವಿ. ಭಾದಿತರಾಗಿ ಬದುಕುತ್ತಿರುವವರು ಇತರರಂತೆ ಸಾಮಾನ್ಯ ಬದುಕನ್ನು ನಡೆಸಲು ಅವಕಾಶ ಕಲ್ಪಿಸಿಕೊಡುವುದಲ್ಲದೆ ಹೊಸಬರು ಸೋಂಕಿಗೆ ಒಳಗಾಗುವು ದನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರೂ ಸಂಘಟಿತ ಪ್ರಯತ್ನ ಮಾಡಬೇಕು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಹೇಳಿದರು.

ಕುಶಾಲನಗರ ತಾಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ., ಎನ್.ಎಸ್.ಎಸ್. ಘಟಕ, ರೆಡ್ ರಿಬ್ಬನ್ ಕ್ಲಬ್ ವತಿಯಿಂದ ವಿಜ್ಞಾನ ಸಂಘ ಹಾಗೂ ಇಕೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ಕೋವಿಡ್ ಮಾರ್ಗಸೂಚಿಯನ್ವಯ ‘ಆರೋಗ್ಯ ಸುರಕ್ಷತೆ ಮತ್ತು ವಿಶ್ವ ಏಡ್ಸ್ ದಿನ: ೨೦೨೧' ರ ಅಂಗವಾಗಿ ಏರ್ಪಡಿಸಿದ್ದ ಜನಜಾಗೃತಿ ಆಂದೋಲನದಲ್ಲಿ ಅವರು ಮಾತನಾಡಿದರು.

ಏಡ್ಸ್ ನಿಯಂತ್ರಣಕ್ಕೆ ವಹಿಸಬೇಕಾದ ಮುಂಜಾಗ್ರತೆ ಕುರಿತು ಮಾಹಿತಿ ನೀಡಿದ ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯ ಮಾತನಾಡಿ, ಜಗತ್ತಿನ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಹೆಚ್.ಐ.ವಿ.ಯಿಂದ ಬಾಧಿತರಾಗುವುದರಿಂದ ಉಂಟಾಗುವ ಆರೋಗ್ಯ ಹಾಗೂ ಸಾಮಾಜಿಕ ಸಮಸ್ಯೆ ಕುರಿತು ಸಾಮಾನ್ಯ ಜನತೆಯಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಿ ಕಳಂಕ, ತಾರತಮ್ಯವನ್ನು ಹೋಗಲಾಡಿ ಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಕೆ. ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಅನ್ಸಿಲಾ ರೇಖಾ, ಎಸ್.ಎಂ. ಗೀತಾ, ಅನಿತಾಕುಮಾರಿ, ಸಿಬ್ಬಂದಿ ಎಂ. ಉಷಾ ಇದ್ದರು.

ಏಡ್ಸ್ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಘೋಷವಾಕ್ಯಗಳ ರಚನೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.