ಕೂಡಿಗೆ, ಡಿ. ೮: ಕೃಷಿ ಇಲಾಖೆಯ ವತಿಯಿಂದ ಬಹು ನಿರೀಕ್ಷೆಯಂತೆ ಖುಷ್ಕಿ ಬೆಳೆಗಾರರಿಗೆ ಅನುಕೂಲವಾಗುವಂತೆ ರೈತರು ಬೆಳೆಯುವ ಬೆಳೆಗಳಿಗೆ ಅನುಸಾರವಾಗಿ ಮಣ್ಣು ಪರೀಕ್ಷೆ ನಡೆಸಿ ಅದಕ್ಕೆ ಬೇಕಾಗುವಂತಹ ರಸಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ಹಾಕುವುದರ ಮುಖಾಂತರ ರೈತರಿಗೆ ವರದಾನವಾಗುವ ದೃಷ್ಟಿಯಿಂದ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ೧೯೭೧ರಲ್ಲಿ ಮಣ್ಣು ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಿ ಅಂದಿನಿAದ ಇಂದಿನವರೆಗೂ ಮಣ್ಣು ಸಂರಕ್ಷಣೆ ಮತ್ತು ಮಣ್ಣಿನ ಪರೀಕ್ಷೆಯ ಮಾಹಿತಿಯನ್ನು ಒದಗಿಸುತ್ತಾ ಬರಲಾಗಿದೆ.
ಈ ಕೇಂದ್ರವು ಕಳೆದ ಮೂರು ವರ್ಷಗಳ ಹಿಂದೆ ಹಾಸನ, ಮೈಸೂರು, ಚಿಕ್ಕಮಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಗೆ ಒಳಪಡುವ ಎಲ್ಲಾ ರೈತರ ಜಮೀನು ಗಳಿಗೆ ಅನುಕೂಲವಾಗುವಂತೆ ಸಕಾಲದಲ್ಲಿ ಮಣ್ಣಿನ ಆರೋಗ್ಯ ಅಭಿಯಾನದಡಿಯಲ್ಲಿ ಮಾಹಿತಿ ಒದಗಿಸುತ್ತಿತ್ತು.
ಅದೇ ರೀತಿಯಲ್ಲಿ ಜಿಲ್ಲೆಯ ಎಲ್ಲಾ ರೈತರ ಜಮೀನಿನ ಮಣ್ಣು ಪರೀಕ್ಷೆ ಮಾಡಿ ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಸರಕಾರವು ಎಲ್ಲಾ ತಾಲೂಕುಗಳಿಗೆ ಪ್ರತ್ಯೇಕ ಪರೀಕ್ಷಾ ಮಣ್ಣು ಪರೀಕ್ಷಾ ಕೇಂದ್ರಗಳನ್ನು ತೆರೆಯುವ ಚಿಂತನೆ ಮಾಡಿತು.
ಅದರಂತೆಯ ಈ ಕೇಂದ್ರವು ಕೆಲವು ವರ್ಷಗಳವರೆಗೆ ಸೋಮವಾರಪೇಟೆ ತಾಲೂಕಿಗೆ ಮೀಸಲಾಗಿದ್ದರೂ ಸಹ ನಂತರದ ದಿನಗಳಲ್ಲಿ ಇಡೀ ಕೊಡಗು ಜಿಲ್ಲೆಗೆ ಇದೊಂದೇ ಮಣ್ಣು ಪರೀಕ್ಷಾ ಕೇಂದ್ರವಾಯಿತು.
ನಾಲ್ಕು ವರ್ಷಗಳ ನಂತರ ಸರಕಾರದ ಹೊಸ ಯೋಜನೆಯಂತೆ ಜಿಲ್ಲೆಗೊಂದು ಮಣ್ಣು ಆರೋಗ್ಯ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿರುವ ಮಣ್ಣು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ವಿವಿಧ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರೋಪ ಕರಣಗಳನ್ನು ಮತ್ತು ಕಂಪ್ಯೂಟರೀ ಕರಣಗೊಳಿಸುವ ಮೂಲಕ ಜಿಲ್ಲೆಯ ರೈತರಿಗೆ ಈ ಕೇಂದ್ರವು ಸಹಕಾರಿಯಾಗಿದೆ. ಮಣ್ಣು ಪರೀಕ್ಷೆಯ ಪ್ರಯೋಗಾಲಯ ಸೇರಿದಂತೆ ಒಂದು ಎಕರೆಗಳಷ್ಟು ಪ್ರದೇಶದಲ್ಲಿ ಇದಕ್ಕೆ ಬೇಕಾಗುವ ಕಟ್ಟಡ ಮತ್ತು ನೌಕರರಿಗೆ ವಸತಿ ಗೃಹಗಳನ್ಮು ನಿರ್ಮಾಣ ಮಾಡಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಈ ಕಟ್ಟಡವನ್ನು ನವೀಕರಣಗೊಳಿಸಿ ಮಣ್ಣು ಪರೀಕ್ಷೆ ಕೇಂದ್ರಕ್ಕೆ ಬೇಕಾಗುವ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ ಎಂದು ಸಂಸ್ಥೆ ಸಹಾಯಕ ನಿರ್ದೇಶಕ ಯಾದವ್ ಬಾಬು ತಿಳಿಸಿದ್ದಾರೆ.
ಈ ಕೇಂದ್ರದಲ್ಲಿ ಮಣ್ಣಿನ ಮಾದರಿ ವಿಶ್ಲೇಷಣೆ ಹಾಗೂ ನೀರು ಮಾದರಿ ವಿಶ್ಲೇಷಣೆಯನ್ನು ಸಕಾಲದಲ್ಲಿ ಮಾಡಿಕೊಡಲಾಗುತ್ತದೆ. ಈ ಸಾಲಿನಲ್ಲಿ ೫೦ ಸಾವಿರಕ್ಕೂ ಹೆಚ್ಚು ರೈತರ ಜಮೀನಿನ ಮಣ್ಣು ಪರೀಕ್ಷೆ ಮಾಡಲಾಗಿದೆ.
ಸ್ವತಃ ರೈತರು ಈ ಕೇಂದ್ರಕ್ಕೆ ತಂದ ಮಣ್ಣನ್ನು ಆರೋಗ್ಯ ಪರೀಕ್ಷೆ ಹಾಗೂ ನೀರಿನ ಮಾದರಿ ವಿಶ್ಲೇಷಣೆ ನಡೆಸ ಬಹುದು. ಮಣ್ಣು ಪರೀಕ್ಷೆಯಿಂದ ಜಮೀನಿನ ಮಣ್ಣಿನ ರಸ ಮತ್ತು ಮಣ್ಣಿನ ಲವಣಾಂಶವನ್ನು ಗುರುತಿಸಿ ಅದರ ಅನುಗುಣವಾಗಿ ರಸ ಗೊಬ್ಬರ ಮತ್ತು ಸಾವಯವ ಗೊಬ್ಬರ ಗಳನ್ನು ಭೂಮಿಗೆ ಬಳಸಲು ಈ ಮಣ್ಣಿನ ಆರೋಗ್ಯ ಕೇಂದ್ರದಿAದ ಪ್ರಯೋಜನ ಆಗುತ್ತಿದೆ ಎಂದು ಅಧಿಕಾರಿ ಯಾದವ್ ಬಾಬು ತಿಳಿಸಿದರು.
ಜಿಲ್ಲೆಯ ರೈತರು ಕಾಫಿ ಕಾಳುಮೆಣಸು, ಬಾಳೆ, ಅಡಿಕೆ, ಏಲಕ್ಕಿ, ಜೋಳ, ಶುಂಠಿ ಬೆಳೆಯುವ ಮಣ್ಣು ಮಾದರಿ ಸಂಗ್ರಹಿಸಿ ಪರೀಕ್ಷಿಸಿಕೊಂಡು ಮಣ್ಣು ಆರೋಗ್ಯ ಚೀಟಿಯನ್ನು ಪಡೆದುಕೊಂಡು ಅದರನುಗುಣವಾಗಿ ಜಮೀನಿನ ಹುಳಿ ಮಣ್ಣಿಗೆ ಸುಣ್ಣ ಹಾಕುವುದು, ಉಳುಮೆ ಮಾಡುವುದು, ಕಾಂಪೋಸ್ಟ್ ಹಸಿರೆಲೆ ಗೊಬ್ಬರ ಬಳಸುವುದರ ಮೂಲಕ ಉತ್ತಮವಾದ ಬೆಳೆಯನ್ನು ಬೆಳೆಯಲು ಸಹಕಾರವಾಗುವುದು ಎಂದಿದ್ದಾರೆ.
ಇದೀಗ ಕೂಡಿಗೆಯಲ್ಲಿರುವ ಮಣ್ಣು ಆರೋಗ್ಯ ಕೇಂದ್ರವು ಮಣ್ಣು ಆರೋಗ್ಯ ಅಭಿಯಾನದಡಿಯಲ್ಲಿ ಮಣ್ಣು ಸಂಗ್ರಹಣೆ ವಿಧಾನ, ಮಣ್ಣು ಪರೀಕ್ಷೆಯ ಮಹತ್ವವನ್ನು ಆಯಾ ಗ್ರಾಮಗಳಲ್ಲಿ ರೈತರಿಗೆ ತಿಳಿಸ ಲಾಗುತ್ತಿದೆ. ರೈತರು ತಮ್ಮ ಜಮೀನಿನ ಮಣ್ಣನ್ನು ಆರೋಗ್ಯ ಕೇಂದ್ರಕ್ಕೆ ತಂದುಕೊಟ್ಟ ನಾಲ್ಕು ದಿನಗಳಲ್ಲಿ ಮಣ್ಣು ಆರೋಗ್ಯವನ್ನು ವಿವಿಧ ತಂತ್ರಜ್ಞಾನದ ಮೂಲಕ ಪರೀಕ್ಷಿಸಿ, ಗಣಕೀಕೃತವಾಗಿ ಮಣ್ಣು ಆರೋಗ್ಯ ಚೀಟಿಯನ್ನು ನೀಡಲಾಗುವುದು. ಮಣ್ಣು ಆರೋಗ್ಯ ಚೀಟಿಯು ವಿವಿಧ ಇಲಾಖೆಯಿಂದ ರೈತರು ವಿವಿಧ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಮಣ್ಣು ಆರೋಗ್ಯ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು ತಿಳಿಸಿದ್ದಾರೆ.
ಈಗಾಗಲೇ ಖುಷ್ಕಿ ಭೂಮಿ ಯಲ್ಲಿ ಜೋಳ ಬೆಳೆಯ ಕೆಲಸ ಮುಗಿದಿದೆ. ಅದೇ ರೀತಿಯಲ್ಲಿ ಭತ್ತದ ಬೆಳೆ ಕಟಾವು ಪ್ರಾರಂಭವಾಗಿದೆ, ಮುಂದಿನ ದಿನಗಳಲ್ಲಿ ಬೇಸಾಯ ಮಾಡುವ ಮುನ್ನ ಜಮೀನಿನ ಮಣ್ಣುನ್ನು ಮಣ್ಣು ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿ ಅದಕ್ಕೆ ಬೇಕಾಗುವ ಪ್ರಧಾನ ಪೋಷಕಾಂಶ, ಲವಣಾಂಶ, ಲಘು ಪೋಷಕಾಂಶ ಬಗ್ಗೆ ಮಾಹಿತಿಯನ್ನು ಪಡೆದು ಅದರ ಅನುಗುಣವಾಗಿ ಬೇಸಾಯ ಮಾಡಿದ್ದಲ್ಲಿ ಫಲವತ್ತತೆಯನ್ನು ಪಡೆಯಲು ಸಹಕಾರಿಯಾಗುತ್ತದೆ.
ಅತ್ಯಾಧುನಿಕ ಮಣ್ಣು ಪ್ರಯೋಗಾಲಯ, ತಂತ್ರಜ್ಞಾನ ಸಹ ಇರುವುದರಿಂದ ರೈತರು ತಮ್ಮ ಜಮೀನಿನ ಮಣ್ಣನ್ನು ಕೂಡಿಗೆ ಮಣ್ಣು ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.