ಮಡಿಕೇರಿ, ಡಿ. ೮: ವ್ಯಕ್ತಿಯೋರ್ವರ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಗಾಯ ಗೊಳಿಸಿದ್ದ ಆರೋಪ ಎದುರಿಸುತ್ತಿದ್ದ ಆರೋಪಿಯೋರ್ವನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೊಹಮ್ಮದ್ ರಿಯಾಜ್ ಎಂಬವರು ಶಿಕ್ಷೆಗೆ ಗುರಿಯಾಗಿರುವ ಆರೋಪಿಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ್ದ ಮಡಿಕೇರಿಯ ಅಪರ ಜೆ.ಎಂ.ಎಫ್.ಸಿ. ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
೩೦.೧೧.೨೦೧೬ ರಂದು ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿ ರಸ್ತೆಯಲ್ಲಿ ಅಬ್ದುಲ್ ಲತೀಫ್ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಮೊಹಮ್ಮದ್ ರಿಯಾಜ್ ಚವರ್ಲೆಟ್ ಕಾರಿನಲ್ಲಿ ಬಂದು ಅವರನ್ನು ತಡೆದು ನಿಲ್ಲಿಸಿ ಜಗಳವಾಡಿ ಕೊಲೆ ಬೆದರಿಕೆಯೊಂದಿಗೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾಗಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಬಗ್ಗೆ ಪೊಲೀಸರು ದೋಷಾರೋಪಣ ಪತ್ರ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ಅಪರ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಸ್ಮಿತಾ ನಾಗಲಾಪುರ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಕೊಲೆ ಬೆದರಿಕೆಗಾಗಿ ೨ ವರ್ಷ ಸಜೆ ಮತ್ತು ರೂ. ೨ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಬಿ.ಎಸ್. ಸಂತೋಷ್ ವಾದ ಮಂಡಿಸಿದ್ದರು.