ಸಿದ್ದಾಪುರ, ಡಿ ೯: ಕಟಾವಿಗೆ ಬಂದಿರುವ ಭತ್ತದ ಕೃಷಿ ಫಸಲನ್ನು ಕಾಡಾನೆಗಳು ದಾಂಧಲೆ ನಡೆಸಿ ನಾಶಪಡಿಸಿರುವ ಘಟನೆ ಚೆನ್ನಂಗಿ ಗ್ರಾಮದ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ.
ಬಸವನಹಳ್ಳಿ ಹಾಡಿಯ ಭಾಗದಲ್ಲಿ ಆದಿವಾಸಿಗಳಿಗೆ ಸರ್ಕಾರದ ವತಿಯಿಂದ ಭತ್ತದ ಕೃಷಿ ಮಾಡಲು ಉತ್ತೇಜನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದ ಆದಿವಾಸಿಗಳು ತಮ್ಮ ಗದ್ದೆಗಳಲ್ಲಿ ಭತ್ತದ ಕೃಷಿಗಳನ್ನು ಮಾಡಿದ್ದಾರೆ. ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂಡು ಬಸವನಹಳ್ಳಿ ಹಾಡಿಯ ನಿವಾಸಿಯಾಗಿರುವ ಗಣೇಶ ಮತ್ತು ರಾಜು ಎಂಬವರ ಕೃಷಿ ಮಾಡಿದ ಗದ್ದೆಗಳಿಗೆ ಲಗ್ಗೆಯಿಟ್ಟು ಕಟಾವಿಗೆ ಬಂದಿರುವ ಭತ್ತದ ಬೆಳೆಗಳನ್ನು ತಿಂದು ತುಳಿದು ಧ್ವಂಸಗೊಳಿಸಿದೆ ಎಂದು ಹಾಡಿಯ ನಿವಾಸಿಗಳು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಕೃಷಿಕ ಗಣೇಶ ಸರ್ಕಾರದ ವತಿಯಿಂದ ಗದ್ದೆಗಳಲ್ಲಿ ಭತ್ತ ಬೆಳೆಯಲು ಸಹಕಾರ ನೀಡಲಾಗುತ್ತಿದೆ.
ಆದರೆ ಕಾಡಾನೆಗಳ ಹಾವಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಭಾಗದಲ್ಲಿ ಹಾಗೂ ಗದ್ದೆಗಳ ಸುತ್ತಲೂ ಅರಣ್ಯ ಇಲಾಖೆಯ ವತಿಯಿಂದ ಸೋಲಾರ್ ಬೇಲಿ ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಕಳೆದ ಕೆಲವು ತಿಂಗಳ ಹಿಂದೆ ಕಾಡಾನೆಗಳು ಬಸವನಹಳ್ಳಿ ಭಾಗದ ಹಾಡಿಯ ಮನೆಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಿತ್ತು ಎಂದರು. ಅಲ್ಲದೇ ಹುಲಿಯು ಕೂಡ ಸುತ್ತಾಡುತ್ತಿದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.