ಮಡಿಕೇರಿ, ಡಿ. ೭: ಕನ್ನಡ ಸಾಹಿತ್ಯ ಪರಿಷತ್ತು ಅನ್ನು ಜನಸಾಮಾನ್ಯರ ಪರಿಷತ್ತಾಗಿ ಮಾಡುವ ಹೆಬ್ಬಯಕೆ ಹೊಂದಲಾಗಿದ್ದು, ಮುಂದಿನ ೫ ವರ್ಷದಲ್ಲಿ ೧ ಕೋಟಿ ಸದಸ್ಯತ್ವ ಕೈಗೊಳ್ಳುವ ಗುರಿಹೊಂದಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ ಹೇಳಿದರು.
ನಗರದ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಷತ್ತು ಚುನಾವಣೆಯ ಇತಿಹಾಸದಲ್ಲಿ ದಾಖಲೆ ಮತಗಳ ಅಂತರದಲ್ಲಿ ತನಗೆ ಗೆಲುವು ದೊರೆತಿದೆ. ವಿಶ್ವಾಸವಿಟ್ಟು ಮತ ನೀಡಿದ್ದೀರ. ಪರಿಷತ್ತಿನಲ್ಲಿ ಹೊಸ ಯುಗ ಸೃಷ್ಟಿಸುವ ನಿಟ್ಟಿನಲ್ಲಿ ನಾವುಗಳು ಸಾಗಬೇಕು. ಮಹತ್ತರ ಜವಾಬ್ದಾರಿ ನಮ್ಮಗಳ ಮೇಲಿದೆ ಎಂದರು.
ಶುಲ್ಕ ಇಳಿಕೆ - ಒಮ್ಮೆ ಮಾತ್ರ ಚುನಾವಣೆಗೆ ಸ್ಪರ್ಧೆ
ಪರಿಷತ್ತು ಸದಸ್ಯತ್ವ ಶುಲ್ಕವನ್ನು ರೂ. ೫೦೦ ರಿಂದ ರೂ. ೨೫೦ ಕ್ಕೆ ಇಳಿಸಲಾಗುತ್ತದೆ. ಪ್ರಪಂಚದ ಮೂಲೆಮೂಲೆಯಲ್ಲಿರುವ ಕನ್ನಡಿಗರನ್ನು ಪರಿಷತ್ತು ಸದಸ್ಯರನ್ನಾಗಿ ಮಾಡಬೇಕಾಗಿದೆ ಎಂದು ಮಹೇಶ್ ಜೋಷಿ ಕರೆ ನೀಡಿದರು. ಮುಂದಿನ ದಿನಗಳಲ್ಲಿ ಒಬ್ಬ ಅಭ್ಯರ್ಥಿ ಒಮ್ಮೆ ಮಾತ್ರ ಜಿಲ್ಲೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು.
(ಮೊದಲ ಪುಟದಿಂದ) ಜಿಲ್ಲಾಧ್ಯಕ್ಷ ಆದವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು ಹೊರತು ಮರಳಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ. ಅಲ್ಲದೆ ತಾಲೂಕು ಘಟಕಕ್ಕೂ ಚುನಾವಣೆ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜೊತೆಗೆ ಭಾರತೀಯ ಸೈನ್ಯದಲ್ಲಿರುವ ಕರ್ನಾಟಕದವರಿಗೆ ಹಾಗೂ ವಿಶೇಷ ಚೇತನರಿಗೆ ಉಚಿತ ಸದಸ್ಯತ್ವ ನೀಡಲಾಗುವುದು. ಕಾಲೇಜು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ರೂ. ೧೦೦ ಗೆ ಸದಸ್ಯತ್ವ ನೀಡಲಾಗುವುದು. ಸಾರಸ್ವತ ಲೋಕದಲ್ಲಿ ರಾಜಕೀಯ ನುಸುಳದಂತೆ ಎಚ್ಚರಿಕೆ ವಹಿಸಲಾಗುವುದು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ರೂ. ೧ ಲಕ್ಷ, ಜಿಲ್ಲಾಧ್ಯಕ್ಷ ಸ್ಪರ್ಧಿಸುವವರು ರೂ. ೫೦ ಸಾವಿರ, ತಾಲೂಕು ಘಟಕಕ್ಕೆ ಸ್ಪರ್ಧಿಸುವವರು ರೂ. ೨೫ ಸಾವಿರ ಠೇವಣಿ ಇಡಬೇಕೆಂಬ ನಿಯಮ ರೂಪಿಸಲಾಗುವುದು. ಕ್ರಿಮಿನಲ್ ಹಿನ್ನೆಲೆ ಹೊಂದಿದವರಿಗೆ ಸದಸ್ಯತ್ವ ನಿರಾಕರಿಸಲಾಗುವುದು. ಆ್ಯಪ್ ಮೂಲಕವೇ ಸದಸ್ಯತ್ವ ನೊಂದಣಿಗೆ ಕ್ರಮವಹಿಸಲಾಗುವುದು. ಇವೆಲ್ಲವೂ ಸದ್ಯದಲ್ಲಿಯೇ ಕಾರ್ಯಗತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಆಗಲು ಕ.ಸಾ.ಪ ಪಾತ್ರ ಅಪಾರವಿದೆ. ಕನ್ನಡ ಚಿರಂಜೀವಿ ಭಾಷೆಯಾಗಿದ್ದು, ಭಾಷೆಯ ಬೆಳವಣಿಗೆ ದೃಷ್ಟಿಯಲ್ಲಿ ಬಳಕೆ ಹೆಚ್ಚಾಗಬೇಕು. ಕೊಡಗು ಗಡಿನಾಡು ಆಗಿರುವ ಹಿನ್ನೆಲೆ ಜಿಲ್ಲಾ ಘಟಕಕ್ಕೆ ಹೆಚ್ಚಿನ ಜವಾಬ್ದಾರಿಗಳಿವೆ. ಎಲ್ಲರ ಸಹಕಾರ ಪಡೆದು ಕೆಲಸ ಮಾಡಬೇಕು. ಪ್ರಪಂಚದ ೭೦೧೧ ಭಾಷೆಗಳ ಪೈಕಿ ೨,೮೯೫ ಭಾಷೆಗಳು ಅಳಿವಿನಂಚಿನಲ್ಲಿವೆ. ಪರಿಪೂರ್ಣ ಭಾಷೆ ಪಟ್ಟಿಯಲ್ಲಿರುವ ಮೂರು ಭಾಷೆಗಳ ಪೈಕಿ ಕನ್ನಡ ಕೂಡ ಒಂದಾಗಿದ್ದು, ಲಿಪಿಗಳ ರಾಣಿ ಎಂದು ಕರೆಸಿಕೊಳ್ಳುವ ಕನ್ನಡದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕೆಂದರು.
ಮಹಾನ್ ವ್ಯಕ್ತಿಗಳಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ
ಅಮರ ಸೇನಾನಿಗಳಾದ ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಮತ್ತು ಸಾಹಿತಿ ಕೊಡಗಿನ ಗೌರಮ್ಮ ಅವರಿಗೆ ಸಿಗಬೇಕಾದ ಗೌರವ, ಮನ್ನಣೆ ದೊರೆಯದ ಬಗ್ಗೆ ಮಹೇಶ್ ಜೋಷಿ ಬೇಸರ ವ್ಯಕ್ತಪಡಿಸಿದರು.
ಭಾರತ ಅಲ್ಲದೆ ಬೇರೆ ದೇಶದಲ್ಲಿ ಇವರಂತಹ ಸಾಧನೆ ಮಾಡಿದವರಿದ್ದಲ್ಲಿ ಸಾವಿರ ಪಟ್ಟು ಹೆಚ್ಚಿನ ಗೌರವ ಸಿಗುತಿತ್ತು ಎಂದು ಹೇಳಿದರು.
ನೂತನ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಕನ್ನಡ ಅನ್ನದ ಭಾಷೆಯಾಗಬೇಕು. ಈ ನಿಟ್ಟಿನಲ್ಲಿ ಕೆಲಸಗಳಾಗಬೇಕಾಗಿವೆ. ಭಾಷೆ ಪೋಷಣೆಗೆ ಹೆಚ್ಚಿನ ಕಾರ್ಯಕ್ರಮಗಳು ನಡೆಯಬೇಕು. ಪರಿಷತ್ತು ಚುನಾವಣೆ ಸಂದರ್ಭ ಹೋಬಳಿ ಮಟ್ಟದಲ್ಲಿ ಮತಕೇಂದ್ರಗಳನ್ನು ತೆರೆಯಬೇಕು. ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತ ಕನ್ನಡ ಭವನವಿಲ್ಲ. ಮಡಿಕೇರಿಯಲ್ಲಿ ಭವನಕ್ಕೆ ಜಾಗ ಕಾಯ್ದಿರಿಸಲಾಗಿದೆ. ಇದಕ್ಕೆ ಸೂಕ್ತ ಅನುದಾನ ಒದಗಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಕ.ಸಾ.ಪ. ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಈ ಹಿಂದಿನ ರಾಜ್ಯಾಧ್ಯಕ್ಷರು ಕೊಡಗಿಗೆ ಒಂದೆ ಒಂದು ಕಾರ್ಯಕ್ರಮಕ್ಕೆ ಬಂದಿಲ್ಲ. ನೂತನ ಅಧ್ಯಕ್ಷರು ಕೊಡಗಿನ ಮೊದಲ ಕಾರ್ಯಕ್ರಮಕ್ಕೆ ಆಗಮಿಸಿ ಸ್ಥೆöÊರ್ಯ ಮೂಡಿಸಿದ್ದಾರೆ. ಕೊಡಗಿನಲ್ಲಿ ಅನ್ಯಭಾಷಿಗರು ಹಾಗೂ ಕನ್ನಡಿಗರು ಒಂದಾಗಿ ಬದುಕುತ್ತಿದ್ದೇವೆ. ಕೊಡವ, ಗೌಡ, ಬ್ಯಾರಿ ಭಾಷೆಗಳ ಅಕಾಡೆಮಿ ಜೊತೆಗೆ ಸಮ್ಮಿಲನ ಕಾರ್ಯಕ್ರಮಗಳನ್ನು ನಡೆಸುವ ಚಿಂತನೆ ಇದೆ. ಭಾಷ ಬಾಂಧÀವ್ಯ ವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಕೆ.ಟಿ. ಬೇಬಿ ಮ್ಯಾಥ್ಯು ಸ್ವಾಗತಿಸಿ, ಮುನೀರ್ ಆಹ್ಮದ್ ನಿರೂಪಿಸಿ, ವಿಲ್ಫೆçಡ್ ಕ್ರಾಸ್ತ ವಂದಿಸಿದರು.