ನಾಗಾಲ್ಯಾಂಡ್ ನಾಗರಿಕರ ಹತ್ಯೆ:ಹಾರ್ನ್ಬಿಲ್ ಉತ್ಸವ ರದ್ದು
ಕೊಹಿಮಾ, ಡಿ. ೭: ಭದ್ರತಾ ಪಡೆಗಳು ೧೪ ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ಈಗ ನಡೆಯುತ್ತಿರುವ ಪ್ರಖ್ಯಾತ ವಾರ್ಷಿಕ ಹಾರ್ನ್ಬಿಲ್ ಉತ್ಸವವನ್ನು ರದ್ದುಗೊಳಿಸಲು ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಅವರ ನೇತೃತ್ವದ ಸಚಿವ ಸಂಪುಟ ಮಂಗಳವಾರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಲ್ಲದೆ ಸಶಸ್ತç ಪಡೆಗಳ(ವಿಶೇಷ ಅಧಿಕಾರ) ಕಾಯ್ದೆಯನ್ನು ಹಿಂಪಡೆಯುವAತೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದ ರಾಜಧಾನಿ ಸಮೀಪದ ಕಿಸಾಮಾದ ನಾಗಾ ಹೆರಿಟೇಜ್ ವಿಲೇಜ್ನಲ್ಲಿ ನಡೆಯುತ್ತಿರುವ ರಾಜ್ಯದ ಅತಿದೊಡ್ಡ ಪ್ರವಾಸೋದ್ಯಮ ಮಹೋತ್ಸವ, ೧೦ ದಿನಗಳ ಹಾರ್ನ್ಬಿಲ್ ಉತ್ಸವವು ತಾ. ೧೦ ರಂದು ಕೊನೆಗೊಳ್ಳಬೇಕಿತ್ತು. ಆದರೆ ನಾಗರಿಕರ ಹತ್ಯೆ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಹ ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಮೋನ್ ಜಿಲ್ಲೆಯಲ್ಲಿ ನಡೆದ ನಾಗರಿಕರ ಹತ್ಯೆಯ ನಂತರ ಪೂರ್ವ ನಾಗಾಲ್ಯಾಂಡ್ ಮತ್ತು ರಾಜ್ಯದ ಇತರ ಭಾಗಗಳ ಹಲವಾರು ಬುಡಕಟ್ಟುಗಳು ತಮ್ಮ ತಮ್ಮ ಮೊರುಂಗ್ಗಳಲ್ಲಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು. ಇನ್ನೂ ಮೋನ್ ಜಿಲ್ಲೆಯ ಟಿರು ಮತ್ತು ಒಟಿಂಗ್ನಲ್ಲಿ ಸೈನಿಕರ ಗುಂಡಿಗೆ ನಿರಾಯುಧ ಗ್ರಾಮಸ್ಥರು ಬಲಿಯಾದ ನಂತರ ಸೇನೆಯ ವಿಶೇಷಾಧಿಕಾರ ರದ್ದು ಮಾಡಿ ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.
ಕ್ಷಮೆಯಾಚಿಸಿದ್ದಲ್ಲಿ ಅಮಾನತು ಆದೇಶ ವಾಪಸ್
ನವದೆಹಲಿ, ಡಿ. ೭: ರಾಜ್ಯಸಭೆಯಿಂದ ಅಮಾನತುಗೊಂಡಿರುವ ಸಂಸದರು ಕ್ಷಮೆ ಕೋರಿದಲ್ಲಿ ಅಮಾನತು ಆದೇಶವನ್ನು ಹಿಂಪಡೆಯಲಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಸಚಿವರುಗಳು ಸಂಸದರ ಅಮಾನತು ಆದೇಶದ ಬಗ್ಗೆ ವಿವರಣೆ ನೀಡಿದ್ದಾರೆ ಎಂದೂ ಜೋಶಿ ತಿಳಿಸಿದ್ದಾರೆ. ನಾವು ಸಂಸದರನ್ನು ಏಕೆ ಅಮಾನತು ಮಾಡಲಾಯಿತು ಎಂಬುದನ್ನು ವಿವರಿಸಿದ್ದೇವೆ. ಏನಾಯಿತು ಎಂಬುದನ್ನು ದೇಶವೇ ನೋಡಿದೆ. ದಾಖಲೆಗಳಲ್ಲಿದೆ. ಅವರು ಇಂದಿಗೂ ಕ್ಷಮೆ ಕೇಳಿದರೆ ನಾವು ಅಮಾನತು ಆದೇಶವನ್ನು ಹಿಂಪಡೆಯುವುದಕ್ಕೆ ಸಿದ್ಧರಿದ್ದೇವೆ ಎಂದು ಜೋಶಿ ಸಂಸದೀಯ ಮಂಡಳಿ ಸಭೆಯ ಬಳಿಕ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ
ಗೋರಖ್ಪುರ, ಡಿ. ೭: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೆಂಪು ಟೋಪಿ ಉತ್ತರ ಪ್ರದೇಶಕ್ಕೆ ರೆಡ್ ಅಲರ್ಟ್ ಎಂದು ಹೇಳಿದ್ದಾರೆ. ಇಂದು ಗೋರಖ್ಪುರದಲ್ಲಿ ಏಮ್ಸ್ ಮತ್ತು ರಸಗೊಬ್ಬರ ಘಟಕ ಸೇರಿದಂತೆ ಮೂರು ಬೃಹತ್ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಉತ್ತರ ಪ್ರದೇಶದಲ್ಲಿ ಕೆಂಪು ಟೋಪಿ ಧರಿಸಿರುವವರು ಕೆಂಪು ದೀಪದ (ಲಾಲ್ ಬತ್ತಿ) ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆದರೆ ಅವರು ನಿಮ್ಮ ನೋವು ಮತ್ತು ದುಃಖಗಳ ಬಗ್ಗೆ ಚಿಂತಿಸುವುದಿಲ್ಲ ಎಂದರು. ಕೆಂಪು ಟೋಪಿ ಜನರು ಹಗರಣಗಳನ್ನು ಮಾಡಲು, ತಮ್ಮ ಬೊಕ್ಕಸವನ್ನು ತುಂಬಿಕೊಳ್ಳಲು, ಅಕ್ರಮವಾಗಿ (ಸಂಪನ್ಮೂಲಗಳನ್ನು) ದೋಚಲು ಮತ್ತು ಮಾಫಿಯಾಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲು ಅಧಿಕಾರ ಬಯಸುತ್ತಿದ್ದಾರೆ" ಎಂದು ಪ್ರಧಾನಿ ಸಮಾಜವಾದಿ ಪಕ್ಷವನ್ನು ಟೀಕಿಸಿದರು.
ಎಸಿಬಿ ದಾಳಿ-ನಾಲ್ವರ ವಿರುದ್ಧ ಎಫ್.ಐ.ಆರ್.
ಬೆಂಗಳೂರು, ಡಿ. ೭: ರಾಜ್ಯಾದ್ಯಂತ ೧೫ ಸರ್ಕಾರಿ ಅಧಿಕಾರಿಗಳ ಮೇಲೆ ನಡೆದ ಎಸಿಬಿ ದಾಳಿಗೆ ಸಂಬAಧಿಸಿದAತೆ ಬೆಂಗಳೂರಿನಲ್ಲಿ ನಾಲ್ವರ ವಿರುದ್ಧ ಬೆಂಗಳೂರಿನ ಎಸಿಬಿ ಠಾಣೆಯಲ್ಲಿ ಈ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಯಲಹಂಕದ ಸರ್ಕಾರಿ ಆಸ್ಪತ್ರೆ ಪಿಸಿಯೋ ಥೆರಪಿಸ್ಟ್ ಎಸ್.ಎನ್. ನಾಗರಾಜ್, ಬಿ.ಬಿ.ಎಂ.ಪಿ. ನೌಕರ ಜಿ.ವಿ. ಗಿರಿ, ಸಕಾಲ ಆಡಳಿತಾಧಿಕಾರಿ ಎಲ್.ಸಿ. ನಾಗರಾಜ್, ಬಿಬಿಎಂಪಿ ಕೇಂದ್ರ ಕಚೇರಿಯ ಪ್ರಥಮ ದರ್ಜೆ ಸಹಾಯಕ, ಮಾಯಣ್ಣ ಅವರುಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲಾ ಆರೋಪಿಗಳ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ೧೩(೧) ,೧೩(೨) ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಉಳಿದಂತೆ ೧೧ ಸರ್ಕಾರಿ ಅಧಿಕಾರಿಗಳ ಮೇಲೂ ರಾಜ್ಯದ ವಿವಿಧ ಎಸಿಬಿ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ. ಭ್ರ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಳೆದ ಕೆಲವು ದಿನಗಳ ಹಿಂದೆ ಏಕಕಾಲದಲ್ಲಿ ರಾಜ್ಯದ ೬೦ ಕಡೆ ದಾಳಿ ನಡೆಸಿತ್ತು. ಈ ವೇಳೆ ೧೫ ಅಧಿಕಾರಿಗಳ ನಿವಾಸ ಸೇರಿ ವಿವಿಧ ಸ್ಥಳಗಳಲ್ಲಿ ಎಸಿಬಿ ಶೋಧ ಕಾರ್ಯಾಚರಣೆ ನಡೆಸಿತ್ತು. ಬೆಂಗಳೂರು, ಬೆಳಗಾವಿ, ಗದಗ ಸೇರಿ ಹಲವು ಜಿಲ್ಲೆಗಳಲ್ಲಿ ಎಸಿಬಿ ದಾಳಿ ನಡೆಸಿ, ಅಧಿಕಾರಿಗಳ ಮನೆಯಲ್ಲಿರುವ ಚಿನ್ನಾಭರಣ, ಕಾಗದ ಪತ್ರಗಳು, ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಅಧಿಕಾರಿಗಳು ಕೋಟಿ ಕೋಟಿ ಒಡೆಯರಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ನಿವಾಸ ಮತ್ತು ಬೇರೆ ಬೇರೆ ನಗರಗಳಲ್ಲಿರುವ ಸಂಬAಧಿಕರ ನಿವಾಸದ ಮೇಲೆಯೂ ದಾಳಿ ನಡೆದಿತ್ತು.
ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ
ಹುಬ್ಬಳ್ಳಿ, ಡಿ. ೭: ರಾಜ್ಯದಲ್ಲಿ ಶೀಘ್ರದಲ್ಲೇ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್ಗಳಿವೆ. ಆದರೆ, ಜಿನೋಮ್ ಪರಿಣಿತವಾಗಿರುವಂತಹ ವ್ಯವಸ್ಥೆ ಬೇಕು. ನಾವು ಎಲ್ಲವನ್ನೂ ಜಿನೋಮ್ ಟೆಸ್ಟ್ ಮಾಡುತ್ತಿಲ್ಲ. ಈಗ ಓಮಿಕ್ರಾನ್ ಬಂದಿದ್ದರಿAದ ಎಲ್ಲೆಲ್ಲಿ ಸಂಶಯ ಬಂದಿದೆಯೋ ಅಲ್ಲಲ್ಲಿ ಜಿನೋಮ್ ಸೀಕ್ವೆನ್ಸ್ ಟೆಸ್ಟ್ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ದೃಢಪಡಿಸಿಕೊಳ್ಳಲು ಎನ್ಸಿಬಿಎಸ್ಗೂ ಕಳುಹಿಸುತ್ತಿದ್ದೇವೆ. ಅತಿ ಶೀಘ್ರದಲ್ಲೇ ಟೆಸ್ಟ್ ರಿಪೋರ್ಟ್ ಬರುತ್ತಿವೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಎಂದು ಹೇಳಿದರು. ಜಿನೋಮ್ ಸೀಕ್ವೆನ್ಸ್ ಪರೀಕ್ಷಾ ಕೇಂದ್ರಗಳ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಅದಕ್ಕೆ ಬೇಕಾಗಿರುವಂತಹ ಪರಿಣಿತರ ವ್ಯವಸ್ಥೆಯಾಗಬೇಕು. ಅದಕ್ಕೆ ಬೇಕಾಗಿರುವ ಉಪಕರಣಗಳ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ಆರೋಗ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ. ಶೀಘ್ರದಲ್ಲೇ ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸ್ ಲ್ಯಾಬ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು.
ಸೂರಜ್ ರೇವಣ್ಣ ವಿರುದ್ಧ ಸಲ್ಲಿಸಿದ್ದ ರಿಟ್ ಅರ್ಜಿ ವಜಾ
ಬೆಂಗಳೂರು, ಡಿ. ೭: ಹಾಸನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ವಿಧಾನ ಪರಿಷತ್ಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆರ್.ಸೂರಜ್ (ಸೂರಜ್ ರೇವಣ್ಣ) ಅವರ ನಾಮಪತ್ರ ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಸಂಬAಧ ಹಾಸನ ಜಿಲ್ಲೆ ದಂಡಿಗಾನ ಹೋಬಳಿಯ ಕುಂದೂರು ಗ್ರಾಮದ ಕೆ.ಎಲ್.ಹರೀಶ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಜಾಗೊಳಿಸಿತು. ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ನಿಮ್ಮ ಆಕ್ಷೇಪಣೆ ಏನಾದರೂ ಇದ್ದರೆ ಅದನ್ನು ಚುನಾವಣಾ ತಕರಾರು ಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ ಎಂದು ನ್ಯಾಯಪೀಠ ಆದೇಶಿಸಿದೆ. ಸೂರಜ್ ಅವರು ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ನಮೂನೆ ೨೬ರ ಅಡಿಯಲ್ಲಿನ ಪ್ರಮಾಣ ಪತ್ರದಲ್ಲಿ ಅನೇಕ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರ, ನಗದು, ಸಾಲ ಹಾಗೂ ಆರ್ಥಿಕ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ ಎಂದು ಆಕ್ಷೇಪಣೆ ಸಲ್ಲಿಸಲಾಗಿತ್ತು.