ಕುಶಾಲನಗರ, ಡಿ. ೭: ಸಮುದಾಯದ ಜನರ ಒಗ್ಗಟ್ಟಿನ ಮೂಲಕ ನೆನೆಗುದಿಗೆ ಬಿದ್ದಿರುವ ಬೇಡಿಕೆಗಳ ಈಡೇರಿಕೆ ಸಾಧ್ಯ ಎಂದು ವಾಲ್ಮೀಕಿ ಜನಾಂಗದ ಮಠಾಧೀಶ ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಕುಶಾಲನಗರಕ್ಕೆ ಭೇಟಿ ನೀಡಿದ ಶ್ರೀಗಳು ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆಯಲ್ಲಿ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯುವ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಪೂರ್ವ ಸಿದ್ಧತೆ ನಡೆಸಿರುವುದಾಗಿ ಮಾಹಿತಿ ನೀಡಿದರು. ಸಮುದಾಯದ ಒಗ್ಗಟ್ಟಿನ ಮೂಲಕ ಕಳೆದ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬೇಡಿಕೆಗಳ ಈಡೇರಿಕೆಗೆ ಜಾತ್ರಾ ಮಹೋತ್ಸವ ಸಂದರ್ಭ ಆಗ್ರಹಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

ಸಮುದಾಯದ ಬೇಡಿಕೆಗಳು ಈಡೇರದಿದ್ದಲ್ಲಿ ಹೋರಾಟದ ಮೂಲಕ ಸಮಸ್ಯೆ ಪರಿಹಾರಕ್ಕೆ ಚಿಂತನೆ ಹರಿಸಲಾಗುವುದು ಎಂದರು. ಈ ಸಂದರ್ಭ ಕೊಡಗು ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಕೆ.ಎನ್. ಅಶೋಕ್ ಮತ್ತು ಪದಾಧಿಕಾರಿಗಳು, ಸಮುದಾಯದ ಪ್ರತಿನಿಧಿಗಳಿದ್ದರು. ಈ ಸಂದರ್ಭ ಶ್ರೀಗಳು ಜಾತ್ರಾ ಮಹೋತ್ಸವದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು.