ಸೋಮವಾರಪೇಟೆ, ಡಿ. ೬: ಶಾಂತಳ್ಳಿ ಹೋಬಳಿ ನಾಡ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದೇ ಇರುವುದರಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ರೈತ ಸಂಘದಿAದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಶಾಂತಳ್ಳಿ ನಾಡಕಚೇರಿಗೆ ಅಧಿಕಾರಿಗಳು ಸರಿಯಾಗಿ ಆಗಮಿಸುತ್ತಿಲ್ಲ. ಇದರಿಂದಾಗಿ ದೂರದೂರುಗಳಿಂದ ಆಗಮಿಸುವ ಸಾರ್ವಜನಿಕರ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆಯೂ ಇಲ್ಲ. ದುಬಾರಿ ಬಾಡಿಗೆ ನೀಡಿ ಕಚೇರಿಗೆ ಆಗಮಿಸಿದರೆ ಅಧಿಕಾರಿಗಳು ಇರುವುದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಪದಾಧಿಕಾರಿಗಳು ದೂರಿದರು.

ಅಧಿಕಾರಿ ಹಾಗೂ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ರೈತರ ಕೆಲಸ ಕಾರ್ಯಗಳಿಗೆ ಸತಾಯಿಸದೇ ನಿಗದಿತ ಸಮಯಕ್ಕೆ ಮಾಡಿಕೊಡುವಂತೆ ಸೂಚನೆ ನೀಡಬೇಕೆಂದು ಪದಾಧಿಕಾರಿಗಳು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಮಾಡಿದರು.

ಈ ಸಂದರ್ಭ ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಸಂಚಾಲಕ ಎಸ್.ಬಿ. ರಾಜಪ್ಪ, ಉಪಾಧ್ಯಕ್ಷ ಎ.ಆರ್. ಕುಶಾಲಪ್ಪ, ಗೌರವ ಸಲಹೆಗಾರ ಬಸವರಾಜು, ರಾಜು ಹಾನಗಲ್ಲು, ಬಳಗುಂದ ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.