ಮಡಿಕೇರಿ, ಡಿ. ೬: ಮಾಂದಲ್‌ಪಟ್ಟಿಯಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮಧ್ಯ ಪ್ರವೇಶ ಮಾಡಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ನಿರುದ್ಯೋಗಿ ಯುವಕರು ಬಾಡಿಗೆ ಜೀಪು ಚಾಲನೆಯ ಮೂಲಕ ಬದುಕು ಕಂಡುಕೊAಡಿದ್ದಾರೆ. ಆದರೆ ಬಾಡಿಗೆ ದರ ಸಮರದಿಂದ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದ್ದು, ಚಾಲಕರ ನಡುವೆ ಕಲಹ ಏರ್ಪಡುತ್ತಿದೆ.

ಬಾಡಿಗೆ ದರ ಸಮರದಿಂದ ಮಾಂದಲ್‌ಪಟ್ಟಿ ಭಾಗದಲ್ಲಿ ನಿತ್ಯ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಇದು ಪುನರಾವರ್ತನೆಯಾಗದಂತೆ ತಡೆಯಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮಧ್ಯ ಪ್ರವೇಶ ಮಾಡಬೇಕು ಎಂದಿದ್ದಾರೆ.

ಬಹಿಷ್ಕಾರ ಸರಿಯಲ್ಲ : ಚಾಲಕರುಗಳ ಕಲಹದ ನಡುವೆಯೇ ಕೆಲವು ಸ್ಥಳೀಯರು ಮಡಿಕೇರಿ ನಗರದ ಯಾವುದೇ ಬಾಡಿಗೆ ವಾಹನಗಳು ಬರಬಾರದೆಂದು ಬಹಿಷ್ಕಾರ ಹಾಕಿರುವ ಕುರಿತು ಆರೋಪ ಕೇಳಿ ಬಂದಿದೆ. ಆದರೆ ಪ್ರತಿಯೊಬ್ಬರಿಗೂ ಪ್ರತಿಯೊಂದು ಕಡೆ ದುಡಿದು ಬದುಕುವ ಹಕ್ಕಿದ್ದು, ಇದಕ್ಕೆ ತಡೆಯೊಡ್ಡುವುದು ಕಾನೂನು ಬಾಹಿರ ಕ್ರಮವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಹಿಷ್ಕಾರದಂತಹ ಕ್ರಮಗಳಿಂದ ಸಂಘರ್ಷಗಳು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಪೊಲೀಸ್ ಇಲಾಖೆ ಮಧ್ಯ ಪ್ರವೇಶ ಮಾಡಿ ಸೂಕ್ತ ತನಿಖೆ ಕೈಗೊಳ್ಳಬೇಕು. ಉಭಯ ಕಡೆಯವರ ಸಭೆ ನಡೆಸಿ ಶಾಂತಿಯ ವಾತಾವರಣ ಸೃಷ್ಟಿಸಬೇಕು ಎಂದು ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.