ಮಡಿಕೇರಿ, ಡಿ. ೬: ಅಳಿವಿನಂಚಿನಲ್ಲಿರುವ ವಿಶ್ವದ ಅನೇಕ ಭಾಷೆಗಳ ಸಾಲಿನಲ್ಲಿ ಕೊಡವ ಭಾಷೆ ಕೂಡ ಸೇರಿಹೋಗಿದ್ದು, ಕೊಡವರು ಈಗಿನಿಂದಲೇ ಜಾಗೃತರಾಗಿ ಮಾತೃ ಭಾಷೆಯನ್ನು ಉಳಿಸುವ ಕಾರ್ಯ ಮಾಡಬೇಕೆಂದು ಹಿರಿಯ ಸಾಹಿತಿ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಕರೆ ನೀಡಿದರು.
ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ “ನಾಡ ಪೆದ ಆಶಾ” ಕೊಡವ ಚಲನಚಿತ್ರ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವ ಭಾಷಾ ಚಲನಚಿತ್ರಗಳನ್ನು ನಿರ್ಮಿಸುವ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ಕಲಾವಿದರಿಗೆ ಸಮಸ್ತ ಕೊಡವರು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೇಪAಡ ಬೋಸ್ ಮೊಣ್ಣಪ್ಪ “ನಾಡ ಪೆದ ಆಶಾ” ಚಲನಚಿತ್ರ ಕೇವಲ ಕೊಡವರಿಗೆ ಮಾತ್ರ ಸೀಮಿತವಾಗಿಲ್ಲ, ಕೊಡವ ಭಾಷೆ ಮಾತನಾಡುವ ಎಲ್ಲಾ ೧೮ ಜನಾಂಗಗಳೂ ಹಾಗೂ ಇತರರು ಈ ಚಿತ್ರವನ್ನು ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಕೊಡವ ಸಂಸ್ಕೃತಿ ಅತ್ಯಂತ ವಿಶಿಷ್ಟವಾಗಿದೆ, ನಾವು ಎಲ್ಲೇ ಇದ್ದರೂ, ಹೇಗೆ ಇದ್ದರೂ ಕೊಡವ ಎನ್ನುವ ಹೆಮ್ಮೆಯನ್ನು ವ್ಯಕ್ತಪಡಿಸಬೇಕು. ಕೊಡವ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು. ಕೊಡವ ಸಮಾಜದ ಉಪಾಧ್ಯಕ್ಷ ಉಡುವೆರ ಹ್ಯಾರಿ ಚಿಟ್ಟಿಯಪ್ಪ, ಗೌರವ ಕಾರ್ಯದರ್ಶಿ ಐಲಪಂಡ ಸಂಜು ಬೆಳ್ಯಪ್ಪ, ಖಜಾಂಚಿ ಅಲ್ಲಾರಂಡ ವಾಸು ಚಂಗಪ್ಪ ಹಾಗೂ ಸಾಹಿತಿ ರಾಣು ಅಪ್ಪಣ್ಣ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಿತ್ರದ ನಾಯಕ ನಟ ಬೊಳ್ಳಜಿರ ಬಿ. ಅಯ್ಯಪ್ಪ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕುಮ್ಮಂಡ ಪಾರ್ವತಿ ಪ್ರಾರ್ಥಿಸಿದರು.