ಕಣಿವೆ, ಡಿ. ೪: ಇಲ್ಲಿಗೆ ಸಮೀಪದ ಭುವನಗಿರಿ ನಿವಾಸಿಗಳು ಸಾಂಕ್ರಾಮಿಕ ರೋಗ ಭೀತಿಯಲ್ಲಿ ದಿನಗಳೆಯುತ್ತಿದ್ದಾರೆ. ಅಂದರೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನಿತ್ಯವೂ ಸಂಗ್ರಹವಾಗುವ ಕಸ ತ್ಯಾಜ್ಯವನ್ನು ಪಟ್ಟಣದಿಂದ ಎಂಟು ಕಿ.ಮೀ. ದೂರದ ಭುವನಗಿರಿ ಗ್ರಾಮದಲ್ಲಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ಸುರಿಯುತ್ತಿರುವುದರಿಂದ ಸಮರ್ಪಕವಾಗಿ ಕಸ ತ್ಯಾಜ್ಯ ನಿರ್ವಹಣೆ ಆಗದೇ ಇರುವುದರಿಂದ ಮಳೆಯಿಂದಾಗಿ ತ್ಯಾಜ್ಯ ಸಂಕುಲ ಕೊಳೆತು ನಾರುವ ವಾಸನೆ ಇಡೀ ಗ್ರಾಮಕ್ಕೆ ಆವರಿಸಿದೆ.
ಇದು ಮನುಷ್ಯರ ಮೇಲಷ್ಟೆ ಅಲ್ಲ ಮುಗ್ಧ ಪ್ರಾಣಿಗಳ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತಿದೆ. ಅಂದರೆ ಗ್ರಾಮದ ಕೃಷಿಕರು ಸಾಕಿರುವ ಜಾನುವಾರುಗಳು, ಮೇಕೆಗಳು, ಆಡು - ಕುರಿಗಳು ಹಾಗೂ ಶ್ವಾನಗಳ ಮೇಲೆ ಇಲ್ಲಿನ ನೊಣಗಳು ಮಾರಣಾಂತಿಕವಾಗಿ ಧಾಳಿ ಮಾಡುತ್ತಿವೆ. ಇದರಿಂದ ಗ್ರಾಮದ ನಿವಾಸಿಗಳು ನರಕ ಯಾತನೆಯಲ್ಲಿ ದಿನಗಳೆಯುತ್ತಿದ್ದಾರೆ. ಕಸ - ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಾಗೆಯೇ ಸುರಿದು ರಾಶಿ ಹಾಕಿರುವ ಲೋಡುಗಟ್ಟಲೇ ಕಸದ ರಾಶಿಯ ಮೇಲೆ ಮಳೆಯ ನೀರು ನಿಂತು ಕೊಳೆತ ಕಾರಣ ಕೆಟ್ಟ ವಾಸನೆ ಗಾಳಿಯಲ್ಲಿ ಪಸರಿಸುತ್ತಿದ್ದು ಇಡೀ ಪರಿಸರ ಅಯೋಮಯವಾಗುತ್ತಿದೆ. ಅಷ್ಟೇ ಅಲ್ಲ, ನೊಣ ಹಾಗೂ ಮಾರಕ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿರುವ ಈ ಕಸ ವಿಲೇವಾರಿ ಘಟಕದಿಂದ ಕಿ.ಮೀ. ತನಕ ಸೊಳ್ಳೆ ಹಾಗೂ ನೊಣಗಳು ಹರಡುತ್ತಿವೆ. ಕಸ ತ್ಯಾಜ್ಯ ಘಟಕದ ಆಸು ಪಾಸಿನ ನಿವಾಸಿಗಳು ಸ್ಥಳೀಯ ಕೂಡಿಗೆ ಗ್ರಾಮ ಪಂಚಾಯಿತಿಗೆ ತಾವು ಅನುಭವಿಸುತ್ತಿರುವ ನಿತ್ಯದ ಸಮಸ್ಯೆಗಳನ್ನು ಹೇಳಿ ಹೇಳಿ ಸಾಕಾಗಿದ್ದು ಒಂದು ರೀತಿ ಜಿಗುಪ್ಸೆಗೆ ಒಳಗಾಗಿದ್ದಾರೆ. ನಮ್ಮ ಸಮಸ್ಯೆಗೆ ಪರಿಹಾರ ನೀಡೋರು ಯಾರೂನು ಇಲ್ಲವೇ ಎಂದು ಅಂಗಲಾಚುತ್ತಿದ್ದಾರೆ.
ಅಂದರೆ, ಅತ್ತ ಕೂಡಿಗೆ ಗ್ರಾ.ಪಂ. ಆಡಳಿತವೂ ತನ್ನ ಜನರಿಗೆ ನ್ಯಾಯ ದೊರಕಿಸುತ್ತಿಲ್ಲ. ಇತ್ತ ಕುಶಾಲನಗರ ಪಟ್ಟಣ ಪಂಚಾಯಿತಿಯೂ ಕೂಡ ಕಸವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಭೀತಿಯಲ್ಲಿ ದಿನಗಳೆಯುತ್ತಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ನಾವು ದಶಕಗಳಿಂದಲೂ ಅನುಭವಿಸುತ್ತಿರುವ ನರಕಯಾತನೆಗೆ ಮುಕ್ತಿ ದೊರಕಿಸಬೇಕೆಂದು ನಿವಾಸಿಗಳು ಬೇಡುತ್ತಿದ್ದಾರೆ.
ಮೂಕ ಪ್ರಾಣಿಗಳ ಮೇಲೆ ನೊಣ: ಕಸ ವಿಲೇವಾರಿ ಘಟಕದ ಆಸುಪಾಸಿನಲ್ಲಿ ರೈತರು ಸಾಕಿರುವ ಹೈನುಗಾರಿಕಾ ಹಸುಗಳು, ಶ್ವಾನಗಳು ಹಾಗು ಆಡು - ಕುರಿಗಳ ಚರ್ಮವನ್ನು ಘಾಸಿಗೊಳಿಸುತ್ತಿರುವ ಮಾರಕ ನೊಣಗಳಿಂದ ನಮ್ಮನ್ನು ರಕ್ಷಿಸಿ ಎಂದು ರೈತರು ಬೇಡುತ್ತಿದ್ದಾರೆ.
ಮನೆ ಮುಂದೆ ರಸಾಯನಿಕ ಸಿಂಪಡಣೆ : ಕಸ ವಿಲೇವಾರಿ ಘಟಕದಿಂದ ರಾಶಿ ರಾಶಿ ಸಂಖ್ಯೆಯಲ್ಲಿ ಬರುವ ನೊಣಗಳು ಮನೆಗಳ ಒಳಗೆ ನುಸುಳಿ ಅತೀವ ಕಾಟ ಕೊಡುತ್ತಿದ್ದು, ಆಹಾರ ಪದಾರ್ಥಗಳ ಮೇಲೂ ಕುಳಿತು ರೋಗ ರುಜಿನಗಳಿಗೆ ಕಾರಣವಾಗುತ್ತಿವೆ ಎಂದು ದೂರಿಕೊಂಡಿರುವ ನಿವಾಸಿಗಳು ತಾವೇ ಸ್ವಂತ ಹಣ ವ್ಯಯಿಸಿ ನೊಣ ನಿವಾರಕ ರಸಾಯನಿಕಗಳನ್ನು ತಂದು ಮನೆಗಳ ಮುಂದೆ ಸಿಂಪಡಿಸಿಕೊಳ್ಳುತ್ತಿದ್ದಾರೆ.
ಮಾಸ್ಕ್ ಧರಿಸಿದರೂ ಕೂಡ ಮೂಗಿಗೆ ರಾಚುವ ದುರ್ವಾಸನೆ : ಈ ಗ್ರಾಮದಲ್ಲಿನ ಕಸ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಇರುವ ನಿವಾಸಿಗಳ ಮನೆಗಳ ಬಳಿ ಯಾರೇ ಆಗಲೀ ಮಾಸ್ಕ್ ಧರಿಸದೇ ತೆರಳುವಂತೆಯೇ ಇಲ್ಲ. ಅಷ್ಟರ ಮಟ್ಟಿಗೆ ದುರ್ವಾಸನೇ ಇಡೀ ಪರಿಸರವನ್ನು ಕಲುಷಿತಗೊಳಿಸಿದೆ.
ವ್ಯರ್ಥವಾಗಿ ಹಣ ಪೋಲು : ಕಸ ವಿಲೇವಾರಿ ಘಟಕದಲ್ಲಿ ಸುರಿಯುವ ಕಸದ ರಾಶಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸುವಲ್ಲಿ ವಿಫಲವಾಗಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಯಂತ್ರಗಳಿAದ ಗುಂಡಿ ತೆಗೆದು ಮುಚ್ಚುವ ನೆಪದಲ್ಲಿ ಲಕ್ಷಾಂತರ ರೂಪಾಯಿಗಳ ಬಿಲ್ ಮಾಡುತ್ತಿದ್ದು, ಸಾರ್ವಜನಿಕ ಹಣವನ್ನು ಅಪವ್ಯಯ ಮಾಡುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದು, ಜೆಸಿಬಿ ಬಳಕೆಯ ನೆಪದಲ್ಲಿ ಕೊಳ್ಳೆ ಹೊಡೆಯುವ ಹಣವನ್ನು ಸ್ಥಳೀಯ ನಿವಾಸಿಗಳಿಗೆ ರಸಾಯನಿಕ ಖರೀದಿಸಲು ಅಥವಾ ನೊಣಗಳಿಂದ ದನ ಕರುಗಳನ್ನು ರಕ್ಷಿಸಲು ಕೊಟ್ಟಿಗೆಗಳಿಗೆ ಅಳವಡಿಸುವ ಸೊಳ್ಳೆ ಪರದೆಗಳನ್ನು ಖರೀದಿಸಿ ಕೊಟ್ಟರೂ ಸಾಕು. ಅತ್ತ ಕೊಳೆತ ಕಸವನ್ನು ಸರಿಯಾಗಿ ನಿರ್ವಹಿಸುತ್ತಲೂ ಇಲ್ಲ. ಇತ್ತ ಕಸದಿಂದ ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳ ನೆರವಿಗೂ ಧಾವಿಸುತ್ತಿಲ್ಲವಲ್ಲ. ನಾವೇನು ಮನುಷ್ಯರಲ್ಲವಾ? ನಮಗೂ ಮಕ್ಕಳು, ದನ ಕರು ಇಲ್ಲವಾ ?
ಈ ಪಂಚಾಯಿತಿಯವರು ಮಾಡೋ ಕರ್ಮಕ್ಕೆ ನಾವು ಇನ್ನೆಷ್ಟು ದಿನ ನರಕ ಅನುಭವಿಸಬೇಕು ಎಂದು ನಿವಾಸಿಗಳು ಗೋಳಿಡುತ್ತಿದ್ದಾರೆ. ಕಸ ತ್ಯಾಜ್ಯ ಘಟಕವನ್ನು ಸರಿಯಾಗಿ ನಿರ್ವಹಿಸಲು ಆಗಲಿಲ್ಲ ಎಂದರೆ ನಮಗೆ ಹಾಗೂ ಜಾನುವಾರುಗಳಿಗೆ ಈ ಕಸದಿಂದ ಉಂಟಾಗುತ್ತಿರುವ ಅನಾರೋಗ್ಯ ಸ್ಥಿತಿಗೆ ಸೂಕ್ತ ಪರಿಹಾರ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ಅನುಪಯುಕ್ತ ಶೌಚಾಲಯ : ಕಸ ವಿಲೇವಾರಿ ಘಟಕದ ಬಳಿ ಲಕ್ಷಾಂತರ ರೂಪಾಯಿಗಳನ್ನು ವ್ಯಯ ಮಾಡಿ ನಿರ್ಮಿಸಿರುವ ಶೌಚಾಲಯ ಕಟ್ಟಡ ಉಪಯೋಗಕ್ಕೆ ಬಾರದ ಮುನ್ನವೇ ಕಾಡು ಗಿಡಗಳಿಂದ ಆವೃತವಾಗಿ ಸಾರ್ವಜನಿಕ ಹಣವೆಲ್ಲಾ ಪೋಲಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಕಸ ಸಂಗ್ರಹಣ ಸ್ಥಳಕ್ಕೆ ಭೇಟಿ ಕೊಟ್ಟು ನಮಗೆ ಸೂಕ್ತ ನ್ಯಾಯ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ಕೆ.ಎಸ್. ಮೂರ್ತಿ