ವಿಜಯಪುರ, ಡಿ. ೫: ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ನೇತೃತ್ವದಲ್ಲಿ ಬರುವ ೨೦೨೨ನೇ ಜನವರಿ ಎರಡನೇ ವಾರದಲ್ಲಿ ವಿಜಯಪುರ ನಗರದಲ್ಲಿ ಒಂದು ದಿನದ ರಾಜ್ಯಮಟ್ಟದ ಸಂಪಾದಕರ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ.

ಸಂಘದ ಅಧ್ಯಕ್ಷ ಎನ್. ಮಂಜುನಾಥ ಅಧ್ಯಕ್ಷತೆಯಲ್ಲಿ ವಿಜಯಪುರದ ಪತ್ರಿಕಾ ಭವನದಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಎಲ್ಲಾ ಸಂಪಾದಕರುಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಬೇಕಿದ್ದು, ಸಂಪಾದಕರುಗಳು ಕುಟುಂಬ ಸಮೇತ ಪಾಲ್ಗೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಸಮ್ಮೇಳನದ ಉದ್ಘಾಟನೆ, ಎರಡು ಗೋಷ್ಠಿಗಳು, ಸಮಾರೋಪ ಸೇರಿದಂತೆ ಒಂದು ದಿನ ಪೂರ್ಣ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. ಜೊತೆಗೆ ೨೫ ವರ್ಷ ಸೇವಾ ಅವಧಿಯನ್ನು ಪೂರ್ಣಗೊಳಿಸಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರುಗಳನ್ನು ಸನ್ಮಾನಿಸುವುದು, ದತ್ತಿ ನಿಧಿ ಹೆಸರಿನಲ್ಲಿ ಹಿರಿಯ ಸಂಪಾದಕರುಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ನಿರ್ಧರಿಸಲಾಯಿತು.

ಸಭೆಯ ಆರಂಭದಲ್ಲಿ ಮಾತನಾಡಿದ ಸಂಘದ ರಾಜ್ಯ ಕೋಶಾಧ್ಯಕ್ಷ ನಾಗತಿಹಳ್ಳಿ ನಾಗರಾಜ ಅವರು ಗೋಕರ್ಣದಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜ್ಯ ಮಟ್ಟದ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದ್ದು, ವಿಜಯಪುರ ಜಿಲ್ಲಾ ಘಟಕ ಸಮ್ಮೇಳನವನ್ನು ಆಯೋಜಿಸಲು ಮುಂದೆ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎನ್.ಮಂಜುನಾಥ ಅವರು, ಸಮ್ಮೇಳನದಲ್ಲಿ ಜಿಲ್ಲಾ ಮಟ್ಟದ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಮಸ್ಯೆಗಳ ಪರಿಹಾರವಾಗಬೇಕಾದರೆ ರಾಜ್ಯಮಟ್ಟದ ಸಮಾವೇಶ ಅಗತ್ಯವೆಂದರು.

ರಾಜ್ಯ ಸಮ್ಮೇಳನ ಸಂಪಾದಕರ ಒಗ್ಗಟ್ಟಿಗೆ ಮತ್ತು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಮಸ್ಯೆಗಳ ಪರಿಹಾರಕ್ಕೆ ಪೂರಕವಾಗುತದಲ್ಲದೆ, ಸರ್ಕಾರದ ಗಮನವನ್ನು ಸಹ ಸೆಳೆಯಬಲ್ಲದು ಎಂದರು.

ಸಂಘದ ವಿಜಯಪುರ ಜಿಲ್ಲಾ ಘಟದ ಅಧ್ಯಕ್ಷ ಟಿ.ಕೆ.ಮಲಗೊಂಡ ಮಾತನಾಡಿ ವಿಜಯಪುರವು ಆತಿಥ್ಯ ನೀಡುವುದಕ್ಕೆ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದು, ಈ ಸಮ್ಮೇಳನವನ್ನು ಕೂಡಾ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸುವ ಸಂಪಾದಕರುಗಳಿಗೆ ವಿಶೇಷ ಆತಿಥ್ಯ ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಈ ಸಮ್ಮೇಳನದಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರುಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಬೇಕು. ಸಂಘದ ಸಂಘಟನೆಯೂ ಕೂಡಾ ಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಘದ ರಾಜ್ಯ ಸಮಿತಿ ನಿರ್ದೇಶನದಂತೆ ಸಮ್ಮೇಳನವನ್ನು ವ್ಯವಸ್ಥಿತವಾಗಿ ಆಯೋಜಿಸ ಲಾಗುವುದು ಎಂದು ಭರವಸೆ ನೀಡಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ ಕುಲಕರ್ಣಿ ಮಾತನಾಡಿ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಸಂಪಾದಕರುಗಳು ತಮ್ಮ ತಮ್ಮ ಕುಟುಂಬ ಸಮೇತ ಪಾಲ್ಗೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸಮ್ಮೇಳನದಲ್ಲಿ ಸಂಪಾದಕರುಗಳ ಕುಟುಂಬಗಳ ಮಿಲನವಾಗಬೇಕು. ಆ ಮೂಲಕ ಕೇವಲ ಸಂಪಾದಕರುಗಳು ಮಾತ್ರವಲ್ಲ ಅವರುಗಳ ಕುಟುಂಬಗಳ ನಡುವಿನ ಬಾಂಧವ್ಯವೂ ಕೂಡಾ ಗಟ್ಟಿಯಾಗಬೇಕು ಎಂದು ಆಶಿಸಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಾಧವರಾವ ಕುಲಕರ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿದಂಬರ ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿ ವಿನೋದ ಸಾರವಾಡ, ಕಾನಿಪ ಜಿಲ್ಲಾಧ್ಯಕ್ಷ ಸಚ್ಚೇಂದ್ರ ಲಂಬು, ಅವಿನಾಶ ಬಿದರಿ, ಕೆ.ಕೆ. ಕುಲಕರ್ಣಿ, ಪಿ.ವಿ. ಮಮದಾಪುರ, ಲಕ್ಷಿö್ಮÃ ವಾಲಿಕಾರ ಪರಶುರಾಮ ಪವಾರ, ಕಲ್ಲಪ್ಪ ಶಿವಶರಣ, ಜಗದೀಶ ನಾಗಠಾಣ, ಶರತ ಅರ್ಜುಣಗಿ, ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡುರ, ಕೊಪ್ಪಳ ಸಂಪಾದಕ ಹೆಚ್.ಎಸ್. ಹರೀಶ, ಹರೀಶ ಕುಲಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.