ಇAದು ಮಹಾನಾಯಕನ ಪರಿನಿರ್ವಾಣ ದಿನ
ಅಖಂಡ ಭಾರತದ ಐತಿಹಾಸಿಕ ಹೆಜ್ಜೆ ಗುರುತುಗಳ ಮಹಾನ್ ವ್ಯಕ್ತಿತ್ವದ ಡಾ. ಬಿ.ಆರ್. ಅಂಬೇಡ್ಕರ್ ಭಾರತೀಯರಿಗೆ ಬಾಬಾ ಸಾಹೇಬರೆಂದೇ ಪರಿಚಿತರು. ಅವರ ಚಿಂತನೆಗಳು ಸಾರ್ವಕಾಲಿಕ ಹಾಗೂ ಅನುಕರಣೀಯ. ಅವರಿಂದ ಒಡಮೂಡಿದ ಚಿಂತನೆಗಳು, ವಿಚಾರಧಾರೆಗಳು, ಭಾರತವೆಂಬ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕತೆಯ ವೈವಿಧ್ಯಮಯ ವಸ್ತುಸ್ಥಿತಿಗಳೆಲ್ಲವಕ್ಕೂ ಚಿಕಿತ್ಸಕ ಮಾದರಿಯಲ್ಲಿವೆ ಮತ್ತು ಹೊಸತನದ ಸಂಚಲನವನ್ನೇ ಸೃಷ್ಟಿಸಿವೆ. ವೈಜ್ಞಾನಿಕ ವೈಚಾರಿಕ ದೃಷ್ಠಿಕೋನದಿಂದ ಒಡಮೂಡಿದ ಅವರ ಚಿಂತನೆಗಳಿಗೆ ವಿಶ್ವದಲ್ಲೇ ಶ್ರೇಷ್ಠವಾದ ಸ್ಥಾನಮಾನವಿದೆ. ಅವರ ಪ್ರಜಾಪ್ರಭುತ್ವದ ಪರಿಕಲ್ಪನೆ ವಿಶ್ವಕ್ಕೆ ಮಾದರಿ.
ಬಾಬಾ ಸಾಹೇಬರ ಬಗ್ಗೆ ಕೇವಲ ಮಾತನ್ನಾಡುವುದಕ್ಕೂ ಅಥವಾ ಕೇವಲ ಪೂಜೆ ಮಾಡುವುದಕ್ಕೂ ಮತ್ತು ಅವರನ್ನು ಅಧ್ಯಯನ ಮಾಡಿ ಅನುಕರಿಸುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ಅವರನ್ನು ಅರಿಯಲು ಅಧ್ಯಯನಶೀಲತೆ ಬಿಟ್ಟರೆ ಬೇರೆ ಹಾದಿ ಇಲ್ಲ. ನಮ್ಮಲ್ಲಿ ಕೆಲವೊಮ್ಮೆ ತಪ್ಪಾಗುವುದುಂಟು. ವಾಸ್ತವವಾಗಿ ಅವರ ಅಧ್ಯಯನವನ್ನು ಮಾಡುವುದಕ್ಕಿಂತಲೂ ಹೆಚ್ಚು ಭಾವನಾತ್ಮಕವಾಗಿ ಹಚ್ಚಿಕೊಂಡಿರುವುದು ಅಪಾಯ. ಅಧ್ಯಯನವಿಲ್ಲದ ಭಾವನಾತ್ಮಕತೆ, ನಮ್ಮವರು ಎಂಬ ಸಣ್ಣತನವನ್ನು ಕೊಡಬಲ್ಲುದೇ ಹೊರತು, ಬಾಬಾ ಸಾಹೇಬರ ವಿದ್ವತ್ತಿನ ಪರಿಚಯವಾಗಲಾರದು. ಅವರು ಸಾಮಾಜಿಕ ವಿಜ್ಞಾನಿ, ಆರ್ಥಿಕ ತಜ್ಞ, ಕಾನೂನು ತಜ್ಞ ಎಂಬAತಹ ಅನೇಕ ಪದಗಳು ಹೇಳಿಕೆಗಳಿಗೆ ಮಾತ್ರ ಸೀಮಿತವಾಗುತ್ತದೆ.
ಬಾಬಾ ಸಾಹೇಬರ ಹೆಸರು ಹೇಳಿದ ತಕ್ಷಣ ಮೊದಲು ಜಾತಿ ನೆನಪಾಗುವುದುಂಟು. ಆಮೇಲೆ ಸಂವಿಧಾನ ನೆನಪಾಗುವುದು. ಅದರ ಜೊತೆಯಲ್ಲೇ ನೆನಪಾಗುವುದು ಮೀಸಲಾತಿ. ಅವರ ಜೀವನ ಆದರ್ಶಗಳ ಅಧ್ಯಯನ, ಅವರ ಜಯಂತಿ ಕೇವಲ ಒಂದು ವರ್ಗದವರೇ ಮಾಡಬೇಕೆನ್ನುವ ಆ ಸಣ್ಣತನದ ಚಿಂತನೆ. ಇಂತಹ ಅಚಾತುರ್ಯಗಳು ಆಗಿಂದಾಗ್ಗೆ ನಮ್ಮ ನಿಮ್ಮ ನಡುವೆ ನಡೆಯುವುದುಂಟು. ಈ ರೀತಿಯ ಚಿಂತನೆಗಳು ಆಳವಾದ ಅಧ್ಯಯನದ ಕೊರತೆಯಿಂದಲೇ ಒಡಮೂಡುವುದಾಗಿದೆ. ಎಲ್ಲಿಯವರೆಗೆ ಬಾಬಾ ಸಾಹೇಬರ ಜ್ಞಾನ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೂ ಅವರನ್ನು ಜಾತಿಯ ದೃಷ್ಠಿಕೋನದಿಂದಲೇ ನೋಡುತ್ತೇವೆ. ಇಂದಿಗೂ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ನಲ್ಲಿ, ಕೊಲಂಬಿಯಾ ಯೂನಿವರ್ಸಿಟಿ, ಜರ್ಮನಿ, ಅಮೇರಿಕಾದ ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿ ನಂಬರ್ವನ್ ವಿದ್ಯಾರ್ಥಿಯನ್ನಾಗಿ ಹಾಗೂ ಮಹಾನ್ ಆದರ್ಶ ವ್ಯಕ್ತಿಯನ್ನಾಗಿ ಬಾಬಾ ಸಾಹೇಬರನ್ನು ಅನುಕರಿಸುತ್ತಿದ್ದಾರೆ. ಕಾರಣ ಅಲ್ಲಿ ಬಾಬಾ ಸಾಹೇಬರ ಜ್ಞಾನ ಗೊತ್ತು. ನಮ್ಮಲ್ಲಿ ಜಾತಿ ಗೊತ್ತು. ಇದು ನಮ್ಮ ಸಮಾಜದ ವಿಪರ್ಯಾಸ. ಆದುದರಿಂದ ಮೊದಲು ಬಾಬಾ ಸಾಹೇಬರು ಅರಿವಾಗಬೇಕಾದರೆ, ಜಾತಿಮತದ ಮುಖವಾಡ ಕಳಚಿಯೇ ಅಧ್ಯಯನ ಮಾಡಬೇಕಿದೆ. ಇಲ್ಲದಿದ್ದಲ್ಲಿ ಆ ಮಹಾನಾಯಕನೆಂಬ ಪರ್ವತದ ಶಿಖರವೇರುವುದಿರಲಿ, ಬುಡದ ಮೆಟ್ಟಿಲೇರುವುದೂ ನಮ್ಮಿಂದ ಸಾಧ್ಯವಿಲ್ಲ.
ಬಾಬಾ ಸಾಹೇಬರು ವಿಶ್ವದಲ್ಲೇ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಮಾತ್ರವಲ್ಲ ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಡಬಲ್ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಕೂಡ. ಅವರು ೬೪ ವಿಷಯಗಳಲ್ಲಿ, ೯ ಭಾಷೆಗಳಲ್ಲಿ, ಪ್ರಪಂಚದ ಬಹುಸಂಖ್ಯೆಯ ಧರ್ಮಗಳ ಅಧ್ಯಯನಗಳಲ್ಲಿ ಪರಿಣಿತಿ ಹೊಂದಿದ್ದರು. ಅವರ ವಿದ್ವತ್ತಿಗೆ ಇನ್ನೊಂದು ಬಹುಮುಖ್ಯ ಉದಾಹರಣೆಯೆಂದರೆ ಅವರ ನಿವಾಸ ರಾಜಗೃಹದಲ್ಲಿನ ಅವರ ವೈಯಕ್ತಿಕ ಲೈಬ್ರರಿಯಲ್ಲಿರುವ ೫೦,೦೦೦ ಪುಸ್ತಕಗಳು. ಮಾತ್ರವಲ್ಲ ಇಪ್ಪತ್ತು ಸಾವಿರ ಪುಟಗಳಿಗಿಂತಲೂ ಅಧಿಕವಾಗಿರುವ ಅವರ ಭಾಷಣ ಹಾಗೂ ಬರಹಗಳ ಸಂಪುಟಗಳು ಬಾಬಾ ಸಾಹೇಬರ ಜ್ಞಾನಸಾಗರಕ್ಕೆ ಸ್ಪಷ್ಟ ಉದಾಹರಣೆ.
ವಿದ್ಯಾರ್ಥಿಯಾಗಿದ್ದಾಗಲೇ ತಾನು ಅನುಭವಿಸಿದ ಜಾತಿಯ ಆ ಕರಾಳಮುಖದ ಜೊತೆಗೆ, ಅವರ ಮನಸ್ಸಿನ ಮೇಲೆ ಆಘಾತ ನೀಡಿದ ಆ ಹೊತ್ತಿನ ಅಸಮಾನತೆ, ಸಾಂಪ್ರದಾಯಿಕ ಮೌಢ್ಯತೆಗಳು ಹಾಗೂ ಅದರ ಬಗ್ಗೆ ಬಾಲಕ ಭೀಮ ಪ್ರಶ್ನಿಸುತ್ತಿದ್ದ ರೀತಿ ಅದಕ್ಕೆ ಅವರ ತಂದೆಯಾದ ರಾಮ್ಜೀ ಸಕ್ಫಾಲ್ ಕೊಡುತ್ತಿದ್ದ ಹೇಳಿಕೆಗಳು ಬಾಲಕ ಭೀಮ್ಜೀ ವ್ಯಕ್ತಿತ್ವದ ಮೇಲೆ ತುಂಬಾ ಪ್ರಭಾವ ಬೀರುತ್ತಿದ್ದುವು. ಇವುಗಳ ಜೊತೆಗೆ ಅವರ ಮೇಲೆ ಪ್ರಭಾವ ಬೀರಿದ ಬುದ್ದ, ಬಸವಣ್ಣ,ಸಂತ ಕಬೀರರು, ಜ್ಯೋತಿಬಾಫುಲೆ, ಸಾವಿತ್ರಿಭಾಯಿಫುಲೆ ಒಟ್ಟಾರೆ ಭಾರತದ ಪರಿವರ್ತನಾ ಹಾದಿಯ ಅನೇಕ ಮಹನೀಯರ ಪಟ್ಟಿಯೇ ಇದೆ ಎನ್ನಬಹುದು.
೧೯೨೭ರಲ್ಲಿ ಮಹಾಡ್ನ ಚೌಡರ್ ಕೆರೆಯ ನೀರಿನ ಸತ್ಯಾಗ್ರಹ ಹಾಗೂ ೧೯೩೦ರಲ್ಲಿನ ಕಾಳರಾಮ ದೇವಾಲಯದ ಪ್ರವೇಶ ಬಾಬಾ ಸಾಹೇಬರ ಹೋರಾಟದ ಹಾದಿಯಲ್ಲಿನ ಐತಿಹಾಸಿಕ ಹೆಜ್ಜೆಗುರುತು. ೧೯೩೦-೩೨ರಲ್ಲಿ ನಡೆದ ದುಂಡುಮೇಜಿನ ಪರಿಷತ್ತುವಿನಲ್ಲಿ ಬಾಬಾ ಸಾಹೇಬರು ಇವೆರಡು ಪ್ರಕರಣದ ಆಧಾರದ ಮೇಲೆ ತನ್ನ ವಾಕ್ಪಟುತ್ವವನ್ನು ಕೇವಲ ಬ್ರಿಟಿಷರನ್ನು ಜಾಲಾಡುವುದಕ್ಕೆ ಮಾತ್ರ ಸೀಮಿತ ಮಾಡದೆ, ಭಾರತದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆಯ ಭೀಕರತೆಯ ಆ ಕರಾಳಕತ್ತಲೆಯನ್ನು ಜಗತ್ತಿನ ವೇದಿಕೆಗೆ ಸಾಕ್ಷಿ ಸಮೇತ ಪರಿಚಯ ಮಾಡಿಸಿದರು. ಇಲ್ಲಿ ಬಹುಮುಖ್ಯ ಅಂಶವೊAದನ್ನು ಗಮನಿಸಬೇಕಾಗಿದೆ. ಬಾಬಾ ಸಾಹೇಬರ ನೇತೃತ್ವದಲ್ಲಿ ನಡೆದ ಚೌಡರ್ಕೆರೆಯ ಸತ್ಯಾಗ್ರಹದಲ್ಲಿ ಅನಂತರಾವ್ಚಿತ್ತೆ, ಎನ್.ಎಂ. ಜೋಷಿ, ಸಹಸ್ರಬುದ್ಧೆ, ಸುರೇಂದ್ರನಾಥ ಟಿಪ್ನಿಸ್, ಅಮೃತಕರ್ ಮುಂತಾದವರನ್ನು ಗಮನಿಸಿದಾಗ ಹಿಂದುಳಿದ ವರ್ಗದ, ಬ್ರಾಹ್ಮಣರ ಮುಂದಾಳುಗಳೂ ಇದ್ದರು ಅನ್ನುವುದು.
ನೋಬಲ್ ಪುರಸ್ಕಾರಕ್ಕೆ ಪಾತ್ರರಾದ ಪ್ರಖ್ಯಾತ ಅರ್ಥಶಾಸ್ತçಜ್ಞರಾದ ಅಮರ್ತ್ಯ್ಸೇನ್ರವರು ತನ್ನ ಅರ್ಥಶಾಸ್ತçದ ಗುರು ಡಾ. ಬಿ.ಆರ್. ಅಂಬೇಡ್ಕರ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅರ್ಥಶಾಸ್ತçದಲ್ಲಿಯೇ ಎರಡು ಪಿ.ಎಚ್ಡಿ ಪಡೆದ ಬಾಬಾ ಸಾಹೇಬರು ಒಬ್ಬ ಸರ್ವಶ್ರೇಷ್ಠ ಅರ್ಥಶಾಸ್ತçಜ್ಞರು. ಅವರ ದಿ ಪ್ರಾಬ್ಲಮ್ ಆಫ್ ದ ರುಪೀ ಇಟ್ಸ್ ಒರಿಜಿನ್ ಅಂಡ್ ಇಟ್ಸ್ ಸಲ್ಯುಷನ್ಸ್ ಎಂಬ ಪುಸ್ತಕ ಜೊತೆ ಅವರ ಆರ್ಥಿಕ ನೀತಿಯ ಚಿಂತನೆಗಳು ಭಾರತೀಯ ರಿಸರ್ವ್ ಬ್ಯಾಂಕ್ನ ಸ್ಥಾಪನೆಗೆ ಕಾರಣವಾಗುತ್ತವೆ.
ಬಾಬಾ ಸಾಹೇಬರ ಕೊಡುಗೆ ಹೇಳುತ್ತಾ ಹೋದರೆ ಬಹುಶಃ ಅದುವೇ ಮುಗಿಯದ ಸಂಪುಟಗಳಾಗಿ ಹೊರಹೊಮ್ಮುತ್ತದೆ. ದಾಮೋದರ್ ಕಣಿವೆಯ ಪ್ರಾಜೆಕ್ಟ್÷್ಸ, ಹಿರಾಕುಡ್ ಡ್ಯಾಮ್, ಗಡಿರೇಖೆ ಸಮಸ್ಯೆಗೆ ಅವರು ನೀಡಿದ ಸಲಹೆ, ಅಂತರಾಜ್ಯ ಜಲವಿವಾದ ಸಮಸ್ಯೆ, ಆರ್ಥಿಕ ನೀತಿ, ಕಾರ್ಮಿಕ ನೀತಿ, ವಿಶ್ವವಿದ್ಯಾನಿಲಯಕ್ಕೆ ಸಂಬAಧಿಸಿದ ಸಲಹೆಗಳು, ಕೃಷಿನೀತಿ..ಪಟ್ಟಿ ನಿಲ್ಲುವುದಿಲ್ಲ..
ಶ್ರಮಜೀವಿಗಳ ನೋವು ಸ್ವತಃ ಅನುಭವಿಸಿದ್ದ ಬಾಬಾ ಸಾಹೇಬರು ೧೪ ಗಂಟೆಗಳ ಕೆಲಸದ ಅವಧಿಯ ಶ್ರಮವನ್ನು ೮ ಗಂಟೆಗಳಿಗೆ ಇಳಿಸಿದ್ದರು. ಸಮಾಜ ವಿಜ್ಞಾನಿಯಾಗಿದ್ದ ಅವರು ೧೯೩೬ ರಲ್ಲಿ ಅವರು ಕಟ್ಟಿದ ಸ್ವತಂತ್ರ ಕಾರ್ಮಿಕ ಪಕ್ಷ ಶ್ರಮಜೀವಿಗಳು, ದೀನದಲಿತರು, ರೈತರು, ಕೃಷಿಕಾರ್ಮಿಕರು, ಮಹಿಳಾ ಕಾರ್ಮಿಕರನ್ನು ಸಂಘಟಿಸಲು ಅವರು ಮಾಡಿದ ದಿಟ್ಟ ಪ್ರಯತ್ನ. ಸಮಾನ ಕೆಲಸಕ್ಕೆ ಸಮಾನ ವೇತನ, ಸಂಬಳ ಸಹಿತ ಹೆರಿಗೆ ರಜೆ, ಉದ್ಯೋಗ ಭದ್ರತೆ ಮುಂತಾದ ಕಾನೂನುಗಳ ಅನುಷ್ಠಾನದಲ್ಲಿ ಅವರ ಪಾತ್ರ ಅಮೋಘವಾದುದು.
೧೯೫೦ ರಲ್ಲಿ ಹಿಂದೂಕೋಡ್ ಬಿಲ್ ಮಂಡನೆ ಸಂದರ್ಭ ವಿರೋಧ ಬಂದಾಗ ತನ್ನ ಕಾನೂನು ಮಂತ್ರಿಯ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದುದು ಅವರ ಸ್ತಿçÃವಾದಿತನಕ್ಕೆ ಸಾಕ್ಷಿಯಾಗಿದೆ.
ಆಳವಾದ ಆಧ್ಯಯನದ ಕೊರತೆ ಹಾಗೂ ಬಾಬಾ ಸಾಹೇಬರು ಅಂದಾಗ ನೆನಪಾಗುವ ಜಾತಿ ಮತ್ತೆ ಮತ್ತೆ ಅವರೊಬ್ಬರೇ ಸಂವಿಧಾನವನ್ನು ಬರೆದರಾ ಎಂಬ ಪ್ರಶ್ನೆಯನ್ನು ತಂದರೂ ತರಬಹುದೇನೊ. ಡಿಸೆಂಬರ್ ೧೭, ೧೯೪೬ರಲ್ಲಿ ಸಂವಿಧಾನ ಅಸೆಂಬ್ಲಿಯಲ್ಲಿ ನಡೆದ ೭೦೦೦ ಪುಟಗಳ ಸಂವಿಧಾನ ಡಿಬೇಟ್ ಅವಲೋಕಿಸಿದರೆ ಸಾಕು. ಬಾಬಾ ಸಾಹೇಬರ ವಿದ್ವತ್ತು ತಿಳಿಯುತ್ತದೆ. ಮಾತ್ರವಲ್ಲ ೨೦,೦೦೦ ಕ್ಕಿಂತಲೂ ಹೆಚ್ಚಿನ ಪುಟಗಳುಳ್ಳ ಅವರ ಬರಹ ಮತ್ತು ಭಾಷಣ ಸಂಪುಟಗಳನ್ನು ನೋಡಿದರೆ, ಇಂತಹ ಎಷ್ಟೋ ಸಂವಿಧಾನಗಳನ್ನು ಬರೆಯುವ ಸಾಮರ್ಥ್ಯ ಬಾಬಾ ಸಾಹೇಬರಿಗೆ ಇತ್ತು ಅನ್ನುವ ಕನಿಷ್ಟ ಜ್ಞಾನವನ್ನಾದರೂ ಬೆಳೆಸಿಕೊಳ್ಳುವುದು ಒಳಿತು.
ಇಲ್ಲೊಂದು ಮಾತು ಹೇಳಬೇಕು. ಮಹಾನ್ ಮಾನವತಾವಾದಿ ಬುದ್ಧರಿಂದ ಪ್ರಾರಂಭವಾದ ಪರಿವರ್ತನಾ ಹಾದಿಯ ಪ್ರತೀಯೊಂದು ಐತಿಹಾಸಿಕ ಹೆಜ್ಜೆಗುರುತುಗಳನ್ನು ಅರಿಯಬೇಕು. ಆ ನಂತರ ಬಾಬಾ ಸಾಹೇಬರನ್ನು ಅಧ್ಯಯನ ಮಾಡಬೇಕು. ಬಹುಶಃ ಆಗ ಬಾಬಾ ಸಾಹೇಬರ ನೈಜ ಚಿತ್ರಣ ಅರ್ಥೈಸಿಕೊಳ್ಳಲು ಸಾಧ್ಯವಾಗಬಹುದೇನೊ. ಬಾಬಾ ಸಾಹೇಬರ ಪರಿನಿರ್ವಾಣ ದಿನವಾದ ಇಂದು ಅವರ ಆದರ್ಶಗಳನ್ನು ಮತ್ತೊಮ್ಮೆ ಮೆಲುಕು ಹಾಕೋಣ.
ಜೈ ಭೀಮ್... ಜೈ ಭಾರತ್
- ಅಬ್ದುಲ್ ರೆಹೆಮಾನ್, ವೀರಾಜಪೇಟೆ.