(ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಡಿ. ೪: ಹಲವು ದಶಕಗಳಿಂದ ಒತ್ತುವರಿಯಾಗಿದ್ದ ಗೋಣಿಕೊಪ್ಪ ನಗರದ ಬೈಪಾಸ್ ರಸ್ತೆಯ ಕೈತೋಡು ತೆರವು ಕಾರ್ಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಗಿಭದ್ರತೆಯ ನಡುವೆ ನಡೆಯಿತು. ಬೆಳ್ಳಂಬೆಳಿಗ್ಗೆ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ಜೆ.ಸಿ.ಬಿ. ಯಂತ್ರಗಳ ಸಹಾಯದೊಂದಿಗೆ ಅಕ್ರಮ ಕಟ್ಟಡಗಳನ್ನು ತೆರವು ಮಾಡಲಾಯಿತು.

ನಗರದ ಕೈತೋಡನ್ನು ಕೆಲವರು ಒತ್ತುವರಿ ಮಾಡಿಕೊಂಡು ನಿಯಮ ಬಾಹಿರವಾಗಿ ಕಟ್ಟಡಗಳನ್ನು ಕಟ್ಟುವ ಮೂಲಕ ಮೂಲ ತೋಡಿನ ಹರಿವಿಗೆ ಸಂಚಕಾರ ಬಂದಿತ್ತು. ಪರಿಣಾಮ ಮಳೆಗಾಲದ ಸಂದರ್ಭ ತೋಡಿನ ನೀರು ಸರಾಗವಾಗಿ ಹರಿಯಲಾಗದೆ ಈ ಭಾಗವು ಸಂಪೂರ್ಣ ಜಲಾವೃತಗೊಳ್ಳುತಿತ್ತು. ಈ ಬಗ್ಗೆ ‘ಶಕ್ತಿ’ ಹಲವು ಬಾರಿ ಸಮಗ್ರ ಸುದ್ದಿಯನ್ನು ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಸುದ್ದಿಯ ಹಿನ್ನೆಲೆಯಲ್ಲಿ ತಹಶೀಲ್ದಾರ್ ಯೋಗಾನಂದ್ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿದಾರರ ಮಾಹಿತಿ ಪಡೆದು ಕೆಲವು ದಿನಗಳಲ್ಲಿ ಸರ್ವೆ ಕಾರ್ಯ ನಡೆಸಿದ್ದರು.

ಈ ವೇಳೆ ಅಧಿಕಾರಿಗಳಿಗೆ ಒತ್ತುವರಿ ತೆರವುಗೊಳಿಸದಂತೆ ಅನೇಕ ಒತ್ತಡಗಳು ಬಂದಿದ್ದವು. ಆದರೆ ತಹಶೀಲ್ದಾರ್ ಒತ್ತಡಗಳಿಗೆ ಮಣಿಯದೆ ೨೮ ಒತ್ತುವರಿದಾರರಿಗೆ ನೋಟೀಸ್ ಜಾರಿಗೊಳಿಸಿ ಒತ್ತುವರಿ ಮಾಡಿಕೊಂಡಿರುವ ತೋಡಿನ ಜಾಗವನ್ನು ತಾವುಗಳೇ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ ಯಾವುದೇ ಒತ್ತುವರಿದಾರರು ಸೂಚನೆಗೆ ಮನ್ನಣೆ ನೀಡದ ಹಿನ್ನೆಲೆ ಅಂತಿಮವಾಗಿ ತಹಶೀಲ್ದಾರ್ ಯೋಗಾನಂದ್, ಪಂಚಾಯಿತಿ ಪಿಡಿಓ ತಿಮ್ಮಯ್ಯ, ಸರ್ವೆ ಅಧಿಕಾರಿ ಬಾನಂಡ ಅರುಣ್, ಪೊನ್ನಂಪೇಟೆ ಆರ್‌ಐ ಸುಧೀರ್, ಸರ್ವೆಯರ್ ಶಿವಾನಂದ್ ರೆಡ್ಡಿ, ಇವರುಗಳು ಪೊಲೀಸರ ಸಮ್ಮುಖದಲ್ಲಿ ಒತ್ತುವರಿ ಕಾರ್ಯವನ್ನು ಮುಂಜಾನೆಯಿAದಲೇ ಆರಂಭಿಸಿದರು. ತೋಡಿನ ವಿವಿಧ ಭಾಗದಲ್ಲಿ ಐದು ಜೆಸಿಬಿಗಳು ಮುಂಜಾನೆಯಿAದಲೇ ತೆರವು ಕಾರ್ಯ ಆರಂಭಿಸಿತು.

ತೋಡಿನ ಜಾಗವನ್ನು ಸೇರಿಸಿಕೊಂಡು ಕಟ್ಟಲಾಗಿದ್ದ ಕಟ್ಟಡಗಳನ್ನು ಕೆಡವಲಾಯಿತು. (ಮೊದಲ ಪುಟದಿಂದ) ತೋಡಿನ ಬದಿಯಲ್ಲಿ ಕೆಲವು ಶೆಡ್‌ಗಳು ಹಾಗೂ ಮನೆಗಳನ್ನು ವಿಸ್ತರಿಸಿ ನಿರ್ಮಿಸಲಾಗಿತ್ತು. ಇವುಗಳ ಮೇಲೆ ಕ್ರಮಕೈಗೊಳ್ಳಲಾಯಿತು. ಭದ್ರತಾ ದೃಷ್ಟಿಯಲ್ಲಿ ಆಯಾ ಕಟ್ಟಿನ ಪ್ರದೇಶದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಹಾಗೂ ಠಾಣಾಧಿಕಾರಿ ಸುಬ್ಬಯ್ಯ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಗೆ ಅಡಚಣೆಯಾಗದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಬೈಪಾಸ್ ರಸ್ತೆಯನ್ನು ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ತಾಲೂಕು ಆಡಳಿತದ ಕಾರ್ಯಕ್ಕೆ ರೈತ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಶ್ಲಾಘನೆ ವ್ಯಕ್ತಪಡಿಸಿದವು. ಬೈಪಾಸ್ ರಸ್ತೆಯ ೮೦೦ ಮೀಟರ್‌ಗೂ ಅಧಿಕ ಕೈ ತೋಡು ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಮೊದಲ ಹಂತವಾಗಿ ಇಂದು ೨೦೦ ಮೀಟರ್ ಒತ್ತುವರಿ ತೆರವು ಕಾರ್ಯ ನಡೆಯಿತು. ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ.

ತೆರವು ಕಾರ್ಯದ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಪದಾಧಿಕಾರಿಗಳಾದ ಚೆಟ್ರುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಶ್,ಚಂಗುಲAಡ ಸೂರಜ್, ಪುಚ್ಚಿಮಾಡ ರಾಯ್ ಮಾದಪ್ಪ, ತೀತರಮಾಡ ರಾಜ, ಸರ್ವೆ ಅಧಿಕಾರಿಗಳಾದ ಎಡಿಎಲ್‌ಆರ್ ಮಹೇಶ್‌ಕುಮಾರ್, ಅಧೀಕ್ಷಕರಾದ ಬಿ.ಡಿ.ಅರುಣ್, ಸರ್ವೆ ಇಲಾಖೆಯ ಸಣ್ಣ ಜವರಯ್ಯ, ಶಿವಾನಂದ್ ರೆಡ್ಡಿ ಹಾಗೂ ಸಿಬ್ಬಂದಿ, ರೆವಿನ್ಯೂ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.ಕೀರೆ ಹೊಳೆಗೆ ಸೇರುವ ಬೈಪಾಸಿನ ಕೈ ತೋಡನ್ನು ಹಲವು ದಶಕಗಳಿಂದ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ನೀರು ಸರಾಗವಾಗಿ ಹರಿಯಲು ಕಷ್ಟವಾಗುತ್ತಿತ್ತು. ಇದರಿಂದಾಗಿ ಮಳೆಯ ಸಂದರ್ಭ ನೀರು ಮನೆಗಳಿಗೆ ಹಾಗೂ ಅಂಗಡಿಗಳಿಗೆ ನುಗ್ಗಿ ಅಪಾರ ನಷ್ಟ ಸಂಭವಿಸುತ್ತಿತ್ತು. ಈ ಬಗ್ಗೆ ಆಗಿಂದ್ದಾಗ್ಗೆ ಮಾದ್ಯಮಗಳು ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿದ್ದವು. ಹಲವು ಬಾರಿ ಖುದ್ದು ಭೇಟಿ ನೀಡಿ ವಾಸ್ತವ ಸ್ಥಿತಿ ಅರಿತಿದ್ದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಒತ್ತುವರಿ ತೆರವಿಗೆ ಮುಂದಾಗಿದ್ದೇವೆ. ಒಂದು ವಾರಗಳ ಕಾಲ ತೆರವು ಕಾರ್ಯ ನಿರಂತರವಾಗಿ ನಡೆಯಲಿದೆ. ತೆರವು ಕಾರ್ಯದಿಂದ ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗಲಿವೆ.

ಯೋಗಾನಂದ್, ತಾಲೂಕು ತಹಶೀಲ್ದಾರ್