ಮಡಿಕೇರಿ, ಡಿ. ೪: ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಸಂದರ್ಭ ಮೊಬೈಲ್ ನಿಷೇಧ ಮಾಡುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್. ಚಂದ್ರಮೌಳಿ ಕಳೆದ ಬಾರಿಯ ಚುನಾವಣೆಯಲ್ಲಿ ೬೬ ಕುಲಗೆಟ್ಟ ಮತಗಳಿಂದ ತಾವು ಸೋಲು ಅನುಭವಿಸುವಂತಾಯಿತು. ಆದರೆ ಕಳೆದ ಬಾರಿಯ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಂಡು, ಮತದಾರರನ್ನು ಶಿಕ್ಷಿತರನ್ನಾಗಿಸಿ ಇದೀಗ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು. ಕಳೆದ ಬಾರಿಯ ರಾಜಕೀಯ ವಾತಾವರಣ ಜಿಲ್ಲೆಯಲ್ಲಿ ಬದಲಾಗಿದೆ ಎಂದೂ ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿರುವ ಒಗ್ಗಟ್ಟಿನ ವಾತಾವರಣ ಈ ಹಿಂದೆ ಎಲ್ಲಿಯೂ ಕಂಡು ಬಂದಿಲ್ಲ. ಬಿಜೆಪಿಯ ದುರಾಡಳಿತ ಮತ್ತು ಚುನಾಯಿತರು ಶಾಸಕರು ಸ್ಪಂದಿಸುತ್ತಿಲ್ಲ ಎಂಬ ಕೊರತೆ ಮತದಾರರಿಗೆ ಕಾಡುತ್ತಿದ್ದು, ಜನರು ಬದಲಾವಣೆ ಬಯಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾನೂನು ಘಟಕದ ಎ.ಎಸ್ ಪೊನ್ನಣ್ಣ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಚುನಾವಣೆ ರಹಸ್ಯ ಮತದಾನದ ಮೂಲಕ ನಡೆಯಬೇಕು. ಹೀಗಾಗಿ ಮತ ಕೇಂದ್ರದ ಒಳಗೆ ಮೊಬೈಲ್, ಗ್ಯಾಜೆಟ್ ಮತ್ತಿತ್ತರ ವಸ್ತುಗಳನ್ನು ಕೊಂಡೊಯ್ಯಲು ಚುನಾವಣಾಧಿಕಾರಿಗಳು ನಿಷೇಧ ಹೇರಬೇಕು ಎಂದು ಆಗ್ರಹಿಸಿದರು. ನಮ್ಮ ಎದುರಾಳಿಗಳು ಮತದಾರರ ಹಾದಿ ತಪ್ಪಿಸುವ ಮತ್ತು ಶೋಷಿತ ವರ್ಗದ ಮತದಾರರನ್ನು ಹಿಡಿದಿಟ್ಟು ಕೊಂಡು ಮತದಾನ ಮಾಡಿಸುವ ಸಾಧ್ಯತೆಗಳ ಬಗ್ಗೆ ಶಂಕೆ ಇದೆ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳ ಬೇಕು. ಈ ಕುರಿತು ಸೋಮವಾರ ಎಸ್.ಪಿ ಹಾಗೂ ಚುನಾವಣಾಧಿಕಾರಿ ಗಳಿಗೆ ಲಿಖಿತ ಮನವಿ ಸಲ್ಲಿಸಲಾಗುತ್ತದೆ ಎಂದು ಪೊನ್ನಣ್ಣ ಹೇಳಿದರು.
ಅಭ್ಯರ್ಥಿ ಮಂಥರ್ ಗೌಡ ಮಾತನಾಡಿ, ಈಗ ಪಂಚಾಯಿತಿ ಅಧ್ಯಕ್ಷರಿಗೆ ೩ ಸಾವಿರ ರೂ. ಹಾಗೂ ಸದಸ್ಯರಿಗೆ ೧ ಸಾವಿರ ರೂ. ಗೌರವ ಧನ ನೀಡಲಾಗುತ್ತಿದೆ. ತನ್ನನ್ನು ಮೇಲ್ಮನೆಗೆ ಆಯ್ಕೆ ಮಾಡಿದಲ್ಲಿ ವೇತನವನ್ನು ೧೦ ಸಾವಿರ ಮತ್ತು ಸದಸ್ಯರಿಗೆ ೫ ಸಾವಿರ ರೂ. ಗಳಿಗೆ ಏರಿಸಲು ಹೋರಾಟ ರೂಪಿಸುವುದಾಗಿ ಭರವಸೆ ನೀಡಿದರು.
ಜಿ.ಪಂ. ಮಾಜಿ ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಹೊರಗಿನಿಂದ ಬಂದವರು ಎಂದೇ ಬಿಜೆಪಿ ಹೇಳುತ್ತಿದ್ದು, ಅದೇ ಅವರ ಅಜೆಂಡಾ ಆಗಿದೆ ಎಂದು ಟೀಕಿಸಿದರು. ಸಂಸದ ಪ್ರತಾಪ್ ಸಿಂಹ ಕೂಡ ಹೊರಗಿನಿಂದ ಬಂದವರು. ಅವರನ್ನು ಜಿಲ್ಲೆಯಲ್ಲಿ ಹುಡುಕಿದರೂ ಸಿಗುತ್ತಿಲ್ಲ ಎಂದು ಆರೋಪಿಸಿದರು. ಹಾಲಿ ಎಂಎಲ್‌ಸಿ ಅವರು ಯಾವುದೇ ಜಿ.ಪಂ ಸಭೆಗಳಿಗೆ ಬರಲಿಲ್ಲ ಎಂದು ಹೇಳಿದ ಚಂದ್ರಕಲಾ, ಜಿಲ್ಲಾ ಪಂಚಾಯಿತಿಯ ೨೧ ಕೋಟಿ ರೂ. ಅನುದಾನ ಸರಕಾರಕ್ಕೆ ಮರಳುವ ಸಂದರ್ಭ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಪಂಚಾಯಿತಿ ಸದಸ್ಯರ ವೇತನ ಹೆಚ್ಚಳಕ್ಕೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು, ಮಂಥರ್ ಗೌಡ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ ಹಾಜರಿದ್ದರು.