ಮಡಿಕೇರಿ, ಡಿ. ೪: ಸಮಾಜದ ನೊಂದವರ ಹಾಗೂ ನಿರ್ಗತಿಕರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬರುತ್ತಿರುವ ‘ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಟ್ರಸ್ಟ್’ ಸೂರಿಲ್ಲದ ಬಡವರಿಗೆ ಮನೆ ನಿರ್ಮಿಸಿಕೊಡುವ ಮಹತ್ತರ ಕಾರ್ಯಕ್ಕೆ ಮುಂದಾಗಿದ್ದು, ಮಾಲ್ದಾರೆ ಗ್ರಾಮದಲ್ಲಿ ಅನಾಥ ಕುಟುಂಬಕ್ಕೆ ರೂ. ೫ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹೊಸ ಮನೆಯ ಹಸ್ತಾಂತರ ಕಾರ್ಯಕ್ರಮ ತಾ. ೫ ರಂದು (ಇಂದು) ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದೆ.
ಕುಶಾಲನಗರದ ಕರ್ನಾಟಕ ಸಾಮಿಲ್ ಮಾಲೀಕ ಎಂ.ಹೆಚ್. ಮೊಹಮ್ಮದ್ ಅವರು ಅಧ್ಯಕ್ಷರಾಗಿರುವ ಕೊಡಗಿನ ಬಡವರ ಬೆಳಕು ಟ್ರಸ್ಟ್ ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಬಡ ಕುಟುಂಬಗಳ ಕಣ್ಣೀರೊರೆಸುವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ.
ನೆರೆ ಹಾವಳಿ ಹಾಗೂ ರೋಗ ರುಜಿನಗಳಿಂದ ಬಳಲುತ್ತಿರುವವರಿಗೆ ಜಾತ್ಯತೀತವಾಗಿ ನೆರವು ಕಲ್ಪಿಸುತ್ತಾ ಬರುತ್ತಿರುವ ಕೆ.ಬಿ.ಬಿ. ಟ್ರಸ್ಟ್, ಈ ಹಿಂದೆ ಗುಂಡಿಕೆರೆಯಲ್ಲಿ ವಿಶೇಷಚೇತನ ಬಡ ವ್ಯಕ್ತಿಗೆ ಹೊಸಮನೆ ನಿರ್ಮಿಸಿಕೊಟ್ಟಿದ್ದು, ಅನೇಕ ನಿರ್ಗತಿಕರಿಗೆ ಆರ್ಥಿಕ ನೆರವನ್ನು ಕಲ್ಪಿಸುತ್ತಾ ಬಂದಿದೆ.
ಟ್ರಸ್ಟ್ನ ವತಿಯಿಂದ ಮಾಲ್ದಾರೆಯಲ್ಲಿ ನಿರ್ಮಿಸಿರುವ ಹೊಸಮನೆಯ ಹಸ್ತಾಂತರವು ಟ್ರಸ್ಟ್ನ ಅಧ್ಯಕ್ಷ ಎಂ.ಹೆಚ್. ಮೊಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಜಿಲ್ಲೆಯ ಉಪಖಾಝಿಗಳಾದ ಎಂ.ಎA. ಅಬ್ದುಲ್ಲ ಫೈಝಿ ಹಾಗೂ ಕೆ.ಎಸ್. ಶಾದುಲಿ ಫೈಝಿ, ಟ್ರಸ್ಟ್ನ ಗೌರವ ಅಧ್ಯಕ್ಷ ಫತ್ತಾಹ್ ಕಡಂಗ, ಜಲೀಲ್ ಅಮ್ಮತ್ತಿ, ಮಜೀದ್ ಕೊಂಡAಗೇರಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.